ಬಳ್ಳಾರಿ: ಗಣಿಗಾರಿಕೆ ಆರ್ಭಟದಿಂದ ಪರಿಸರ ಹಾನಿ ಮಧ್ಯೆ ಐತಿಹಾಸಿಕ ದೇವಸ್ಥಾನಗಳ ಅಸ್ತಿತ್ವಕ್ಕೆ ಧಕ್ಕೆಯಾಗುವ ಭೀತಿ ಎದುರಾಗಿದೆ. ಸಂಡೂರು ತಾಲೂಕಿನ ಐತಿಹಾಸಿಕ ಪಾರ್ವತಿ ದೇಗುಲದ ಗೋಡೆಯ ಕಲ್ಲು ಕಳಚಿ ಬಿದ್ದಿದೆ. ಇದಕ್ಕೆ ದೇಗುಲದ ಅನತಿ ದೂರದಲ್ಲಿ ನಡೆಯುತ್ತಿರುವ ಗಣಿಗಾಣಿರಿಕೆಯೇ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಂಡೂರು ತಾಲೂಕಿನ ಬೆಟ್ಟದ ಮೇಲೆ 6-7ನೇ ಶತಮಾನದ ಐತಿಹಾಸಿಕ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನವಿದೆ. ದೇವಸ್ಥಾನದ ಕೇವಲ 600 ಮೀಟರ್ ವ್ಯಾಪ್ತಿಯಲ್ಲಿ ಕೆಲವು ಕಂಪನಿಗಳು ಗಣಿಗಾರಿಕೆ ನಡೆಸುತ್ತಿರುವುದೇ ದೇಗುಲ ಕಲ್ಲು ಕಳಚಿ ಬೀಳಲು ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ದೇವಸ್ಥಾನವು ಕೇಂದ್ರ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನವಾಗಿರುವುದರಿಂದ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಇಂತಹ ಧಾರ್ಮಿಕ ಶಕ್ತಿ ಕೇಂದ್ರವನ್ನು ರಕ್ಷಿಸಬೇಕಾಗಿದೆ. ಹೊಸಪೇಟೆ ಬಳಿಯ ಜಂಬುನಾಥಸ್ವಾಮಿ ದೇವಾಲಯದ ಸುತ್ತ 2 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ಇದೇ ಆದೇಶವನ್ನು ಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನಕ್ಕೆ ವಿಸ್ತರಣೆಯಾಗಬೇಕು ಎಂಬುವುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಹಲವು ಹೋರಾಟ ಮತ್ತು ಪಾದಾಯಾತ್ರೆಯನ್ನು ಸಹ ಮಾಡಲಾಗಿತ್ತು.
ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ
6-7ನೇ ಶತಮಾನದ ಐತಿಹಾಸಿಕ ದೇವಸ್ಥಾನಕ್ಕೆ ಗಣಿಗಾರಿಕೆಯಿಂದ ಹಾನಿಯಾಗುತ್ತಿದೆ ಎಂದು ಕೇಂದ್ರ ಪುರಾತತ್ವ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದೇವಸ್ಥಾನದ ಸುತ್ತ ನಡೆಯುವ ಗಣಿಗಾರಿಕೆಯಿಂದಾಗಿ ಪಾರ್ವತಿ ದೇವಸ್ಥಾನದ ಗೋಡೆಯ ಕಲ್ಲು ಕಳಚಿ ಬಿದ್ದಿದೆ. ದೇವಸ್ಥಾನದ ಸುತ್ತಲೂ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
| ಶಿವಕುಮಾರ್, ನ್ಯಾಯವಾದಿ, ಸಂಡೂರು