ಬೆಂಗಳೂರು: ಸಂರಕ್ಷಿತ ಅರಣ್ಯಗಳು ಮತ್ತು ಅಭಯಾರಣ್ಯಗಳ ಸುತ್ತಲೂ ಬಫರ್ ವಲಯ ಅಥವಾ ಪರಿಸರ ಸೂಕ್ಷ್ಮ ವಲಯ (ESZ)ಎಂದು ಗುರುತಿಸಿದಾಕ್ಷಣ, ಆ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರ ಮಾಡುವುದಿಲ್ಲ. ಸ್ಥಳೀಯರ ಜೀವನಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಅಷ್ಟೇ ಅಲ್ಲ ‘ಆ ಭಾಗದಲ್ಲಿ ಕೃಷಿ-ತೋಟಗಾರಿಕಾ ಚಟುವಟಿಕೆ ನಡೆಸಲೂ ಯಾವುದೇ ತೊಂದರೆ ಕೊಡುವುದಿಲ್ಲ’ ಎಂದೂ ಕೇಂದ್ರ ಪರಿಸರ ಇಲಾಖೆ ಮಾಹಿತಿ ನೀಡಿದೆ.
ಪಶ್ಚಿಮ ಘಟ್ಟ ಭಾಗದ ಶೇ.37ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಬೇಕು. ಮತ್ತು ಆ ಪ್ರದೇಶಗಳಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಇತರ ಎಲ್ಲ ಮಾದರಿಯ ಕೈಗಾರಿಕೆಗಳನ್ನೂ ಸಂಪೂರ್ಣ ನಿಷೇಧಿಸಬೇಕು ಎಂದು ಡಾ. ಕಸ್ತೂರಿರಂಗನ್ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿದೆ. ಅದೇನೂ ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಯಾವುದೇ ರಾಜ್ಯಗಳೂ ಕಸ್ತೂರಿ ರಂಗನ್ ವರದಿಯನ್ನು ಒಪ್ಪುತ್ತಲೂ ಇಲ್ಲ.
ಇಷ್ಟರ ಮಧ್ಯೆ ಜೂನ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಒಂದು ಸೂಚನೆ ನೀಡಿತ್ತು. ‘ಪ್ರತಿ ಸಂರಕ್ಷಿತ ಅರಣ್ಯ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳ ಗಡಿಯಿಂದ ಒಂದು ಕಿಮೀ ದೂರದವರೆಗೆ ಬಫರ್ ಅಥವಾ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಬೇಕು. ಹೀಗೆ ಮಾಡುವಂತೆ ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೂ ಸೂಚನೆ ನೀಡಬೇಕು ಮತ್ತು ಹೀಗೆ ಸೂಕ್ಷ್ಮ ವಲಯ ಎಂದು ಗುರುತಿಸಲ್ಪಟ್ಟ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕಗಳನ್ನೂ ನಡೆಸಲು ಅವಕಾಶ ಕೊಡಬಾರದು ಎಂದು ಹೇಳಿತ್ತು. ಆದರೆ ಸುಪ್ರೀಂಕೋರ್ಟ್ನ ಈ ಸೂಚನೆಗೇ ಕೇಂದ್ರ ಸರ್ಕಾರ ಪ್ರತಿ ಸವಾಲು ಹಾಕಿತ್ತು. ಆದರೂ ಸುಪ್ರೀಂಕೋರ್ಟ್ ಸೂಚನೆ ಪಾಲನೆ ಮಾಡಬೇಕಾದ ಅಗತ್ಯವೂ ಕೇಂದ್ರಕ್ಕೆ ಇದೆ.
ಸುಪ್ರೀಂಕೋರ್ಟ್ನ ಈ ಸೂಚನೆ ಬಗ್ಗೆ ಪಶ್ಚಿಮ ಘಟ್ಟ ವಲಯದ ವ್ಯಾಪ್ತಿಯಲ್ಲಿರುವ ರಾಜ್ಯ ಸರ್ಕಾರಗಳು ಕಳವಳ ವ್ಯಕ್ತಪಡಿಸಿದ್ದವು. ಈ ಬಾರಿ ಸಂಸತ್ನಲ್ಲೂ ಕೂಡ ಕರ್ನಾಟಕ, ಕೇರಳ ಮತ್ತು ಈ ವಲಯದ ವ್ಯಾಪ್ತಿಯ ರಾಜ್ಯಗಳ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗೆ ಸೂಕ್ಷ್ಮ ವಲಯ ಎಂದು ಗುರುತಿಸಿಬಿಟ್ಟರೆ, ಅಲ್ಲಿನ ಸ್ಥಳೀಯರನ್ನೂ ಒಕ್ಕಲೆಬ್ಬಿಸಬೇಕಾಗುತ್ತದೆ ಎಂದು ಕೇರಳದ ಸಂಸದ ಮುರಳೀಧರನ್ ಆತಂಕ ವ್ಯಕ್ತಪಡಿಸಿದ್ದರು ಹಾಗೂ ಕೇಂದ್ರ ಸರ್ಕಾರದಿಂದ ಉತ್ತರ ಬಯಸಿದ್ದರು.
ಇದೀಗ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಮುರಳೀಧರನ್ ಅವರಿಗೆ ಪತ್ರ ಬರೆದು, ‘ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತಲಿನ ಪರಿಸರವನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದರೆ, ಅಲ್ಲಿರುವ ಸ್ಥಳೀಯರ ಸ್ಥಳಾಂತರ ಮಾಡುವುದಿಲ್ಲ. ಜನರ ಮೇಲಾಗಲೀ, ಅವರ ವೃತ್ತಿಯ ಮೇಲಾಗಲೀ ಪರಿಣಾ ಬೀರುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಒಂದು ವರ್ಷ ಕಸ್ತೂರಿ ರಂಗನ್ ವರದಿಗೆ ಬ್ರೇಕ್: ಬೀಸೋ ದೊಣ್ಣೆಯಿಂದ ಮಲೆನಾಡಿಗರು ಪಾರು