Site icon Vistara News

ದೇಗುಲ ಅಭಿವೃದ್ಧಿಗೆ ಅಡ್ಡಿ, ಎಸ್‌ಡಿಪಿಐ ವಿರುದ್ಧ ತಿರುಗಿಬಿದ್ದ ದಲಿತರು

kanchinadka temple

ಅಶ್ವತ್ಥ್ ಆಚಾರ್ಯ, ಉಡುಪಿ
ಪ್ರತಿ ಚುನಾವಣೆಗೂ ಮುನ್ನ ದಲಿತರನ್ನು ಓಲೈಸಿ ನಮ್ಮವರು ಎಂದು ಎದೆ ತಟ್ಟಿ ಹೇಳಿಕೊಳ್ಳುವ ಎಸ್ಡಿಪಿಐ ಕರಾವಳಿಯಲ್ಲಿ ಹಿಂದೂ ದೇಗುಲ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದೆ. ಪಡುಬಿದ್ರಿ ಮುಂಡಾಲ ಸಮಾಜದ ಪವಿತ್ರ ಕ್ಷೇತ್ರವಾಗಿರುವ ಕಂಚಿನಡ್ಕ ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸಿದ್ದರಿಂದ ಮುಸ್ಲಿಂ ಸಮುದಾಯದ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಹೌದು, ಇದು ಉಡುಪಿ ಜಿಲ್ಲೆಯ ಗಡಿಯಲ್ಲಿರುವ ಪಡುಬಿದ್ರಿಯ ಕಂಚಿನಡ್ಕ, ಕರಾವಳಿಯ ಪ್ರಭಾವಿ ದಲಿತ ಸಮುದಾಯವಾಗಿರುವ ಮುಂಡಾಲ ಸಮಾಜಕ್ಕೆ ಇದು ಅತ್ಯಂತ ಪವಿತ್ರ ಕ್ಷೇತ್ರ. ಸಾಕಷ್ಟು ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಇರುವ ಈ ಕ್ಷೇತ್ರ ಈಗ ವಿವಾದದ ಕೇಂದ್ರಬಿಂದುವಾಗಿದೆ. ಕಂಚಿನಡ್ಕದಲ್ಲಿ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವ ನೆಲೆಸಿದ್ದು, ಈ ಜಾಗಕ್ಕೆ ಸೂಕ್ತ ಚಾವಣಿ ವ್ಯವಸ್ಥೆ ಇಲ್ಲ. ದಾನಿಯೊಬ್ಬರು ಚಾವಣಿ ನಿರ್ಮಿಸಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಸ್ಥಳೀಯ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ.

ಚಾವಣಿ ಅಳವಡಿಸಿದರೆ ತಮ್ಮ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎನ್ನುವುದು ಕೆಲವು ಮುಸ್ಲಿಂ ಮುಖಂಡರ ವಾದ. ಕಂಚಿನಡ್ಕ ಕ್ಷೇತ್ರಕ್ಕೆ ನೂರಾರು ವರ್ಷ ಇತಿಹಾಸವಿದೆ. ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ದಲಿತ ಸಮುದಾಯದ ನಿವಾಸಿಗಳಿದ್ದು, ಇವರನ್ನು ಪುಸಲಾಯಿಸಿ ಎಸ್ಡಿಪಿಐ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಈಗ ಎಸ್ಡಿಪಿಐ ಪಕ್ಷ ಕೇವಲ ಮುಸ್ಲಿಮರ ಪರವಾಗಿ ನಿಂತಿದ್ದು, ದಲಿತರು ಕಂಗಾಲಾಗಿದ್ದಾರೆ. ಎಸ್ಡಿಪಿಐ ಪಕ್ಷದ ಈ ನಡೆಯಿಂದ ಬೇಸತ್ತು ದಲಿತ ಮುಖಂಡ ಸದಾಶಿವ ಕಂಚಿನಡ್ಕ ಈಗಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎಸ್ಡಿಪಿಐ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ.

ʼʼದೇವಸ್ಥಾನಕ್ಕೆ ಯಾವುದೇ ಚಾವಣಿ ಇಲ್ಲ. ಹೀಗಾಗಿ ದಾನಿಯೊಬ್ಬರು ತಗಡಿನ ಚಪ್ಪರ ಹಾಕಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ನಡೆದ ಹಿಂದು-ಮುಸ್ಲಿಂ ಸೌಹಾರ್ದ ಸಭೆಯಲ್ಲಿ ಅಲ್ಪಸಂಖ್ಯಾತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಿಂದು ಮುಖಂಡರು ದೇವಸ್ಥಾನ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲಬೇಕುʼʼ ಎಂದು ಎಸ್ಡಿಪಿಐ ಪಕ್ಷದಿಂದ ಹೊರ ಬಂದಿರುವ ದಲಿತ ಮುಖಂಡ ಸದಾಶಿವ ಕಂಚಿನಡ್ಕ ಮನವಿ ಮಾಡಿದ್ದಾರೆ.

ʼದಲಿತ – ಮುಸಲ್ಮಾನ ಭಾಯಿ ಭಾಯಿ ಎನ್ನುವ ಎಸ್ಡಿಪಿಐ ಮುಖಂಡರು ಪೊಲೀಸರ ಎದುರೇ, ದಲಿತರಿಗೆ ಅವರ ದೇವಸ್ಥಾನ ಅಭಿವೃದ್ಧಿಪಡಿಸಲು ಅವಕಾಶ ನೀಡುವುದಿಲ್ಲ ಎಂದು ತೊಡೆ ತಟ್ಟಿದ್ದಾರೆ. ಇದರಿಂದಾಗಿ ಶಾಂತಿಸಭೆ ಮುರಿದು ಬಿದ್ದಿದೆ. ದಲಿತ ಸಂಘಟನೆಗಳ ಬೆಂಬಲಕ್ಕೆ ಹಿಂದೂ ಜಾಗರಣ ವೇದಿಕೆ ಮುಂದಾಗಿದೆ. ಹಿಂದೂ ಜಾಗರಣ ವೇದಿಕೆ ಮುಖಂಡರು ಸಭೆ ನಡೆಸಿದ್ದು, ಸ್ಥಳೀಯ ಪಂಚಾಯಿತಿಗೆ ಒಂದು ವಾರದ ಗಡುವು ವಿಧಿಸಿದ್ದಾರೆ. ಒಂದು ವಾರದೊಳಗೆ ಚಾವಣಿ ಅಳವಡಿಸಲು ಅವಕಾಶ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದುʼʼ ಎಂದು ಅವರು ಎಚ್ಚರಿಸಿದ್ದಾರೆ.

ಪಡುಬಿದ್ರೆ ಗ್ರಾಮಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಿದ್ದರೂ ಅವರು ಎಸ್ಡಿಪಿಐ ಬೆಂಬಲಿತ ಸದಸ್ಯರ ಮುಲಾಜಿಗೆ ಬಿದ್ದಂತೆ ಕಾಣುತ್ತಿದೆ. ಇದು ಹಿಂದೂಪರ ಸಂಘಟನೆಗಳನ್ನು ಕೆರಳಿಸಿದ್ದು ಪಂಚಾಯಿತಿ ವಿರುದ್ಧ ಹೋರಾಟಕ್ಕೆ ಕರೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ | ಅಯೋಧ್ಯೆಯ ರಾಮ ಮಂದಿರದ ಗರ್ಭ ಗೃಹಕ್ಕೆ ಜೂನ್‌ 1 ರಂದು ಸಿಎಂ ಯೋಗಿ ಆದಿತ್ಯನಾಥ್ ಶಿಲಾನ್ಯಾಸ

Exit mobile version