ಶಿರಸಿ: ದಿನನಿತ್ಯದ ಬದುಕಿಗಾಗಿ ಹೋರಾಡುತ್ತಿರುವ ಆಟೊ ಚಾಲಕರಿಗೆ (Auto drivers) ಭರವಸೆ ನೀಡುತ್ತಿರುವ ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್ (Ananthamurthy Hegde Charitable Trust) ಕಾರ್ಯ ಶ್ಲಾಘನೀಯ ಎಂದು ಸ್ಕೋಡ್ ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೇಳಿದರು.
ನಗರದ ಅಂಬೇಡ್ಕರ್ ಸಭಾಭವನದಲ್ಲಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್ ನಿಂದ ಶಿರಸಿ ತಾಲೂಕಿನ ಆಟೊ ರಿಕ್ಷಾ ಹಾಗೂ ಗೂಡ್ಸ್ ರಿಕ್ಷಾ ಚಾಲಕ-ಮಾಲೀಕರಿಗೆ ಉಚಿತ ಸಮವಸ್ತ್ರ ವಿತರಣೆ, ಔತಣಕೂಟ, ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಹಣ ಉಳ್ಳವರಲ್ಲಿ ದಾನ ಮಾಡುವ ಗುಣ ಇರುವುದಿಲ್ಲ. ಆದರೆ ತಮ್ಮ ಉದ್ಯಮದಲ್ಲಿ ಗಳಿಸಿದ ಹಣದಲ್ಲಿ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸದಲ್ಲಿ ನಿರತರಾಗಿರುವ ಅನಂತಮೂರ್ತಿ ಹೆಗಡೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ಸಾಧಿಸಲಿ ಎಂದರು.
ಇದನ್ನೂ ಓದಿ: Mobile Addiction : ಮಕ್ಕಳಿಗಿನ್ನು ಮೊಬೈಲ್ ಮುಟ್ಟಿದರೆ ಮುನಿ; ಇದು ಹೊಸ APP ಕಹಾನಿ!
ಓದುಗನಿಗೆ ಶಿಕ್ಷಣ, ಆಸರೆಗೆ ಮನೆ, ಹಸಿದವಿಗೆ ಅನ್ನ ಮೂಲವನ್ನಾಗಿಟ್ಟುಕೊಂಡು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ. ಆಟೋ ಚಾಲಕರ ಕಷ್ಟವನ್ನು ಸಮೀಪದಿಂದ ನೋಡಿದವರಿಗೆ ಮಾತ್ರ ಅರ್ಥವಾಗುತ್ತದೆ. ಹಗಲು ರಾತ್ರಿಯನ್ನದೇ ತಮ್ಮ ದುಡಿಮೆಯ ಮೂಲಕ ಬದುಕು ಸಾಗಿಸುತ್ತಿದ್ದಾರೆ. ಅವರ ಕಷ್ಟಕ್ಕೆ ನಾವೆಲ್ಲರೂ ಸ್ಪಂದಿಸಬೇಕಿದೆ ಎಂದರು.
ದಾರಿ ತಪ್ಪಿ ಬಂದ ಪ್ರಯಾಣಿಕರನ್ನು ಸೂಕ್ತ ಜಾಗಕ್ಕೆ ತಲುಪಿಸುವುದು, ಆಟೋದಲ್ಲಿ ಬಿಟ್ಟು ಹೋದ ಬೆಲೆ ಬಾಳುವ ವಸ್ತುಗಳನ್ನು ವಾಪಸ್ಸು ಮಾಲೀಕರಿಗೆ ಮರಳಿಸುವ ಕೆಲಸವನ್ನು ಆಟೋ ಚಾಲಕರು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ಇವರನ್ನು ಗುರುತಿಸಿ, ಗೌರವಿಸುವ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಗ್ಯಾರೇಜ್ ಕಾರ್ಮಿಕರು, ಹೋಟೆಲ್ ಗಳ ಸಪ್ಲಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಬದುಕು ಸವೆಸುತ್ತಿದ್ದಾರೆ. ಟ್ರಸ್ಟ್ ನಿಂದ ಅವರನ್ನು ಗುರುತಿಸಿ, ಅವರ ಜೀವನಕ್ಕೆ ಸಹಾಯ ಮಾಡಬೇಕೆಂದು ವಿನಂತಿಸಿದರು.
ನಗರ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹಾಗೂ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆಟೋ ಚಾಲಕರು ಹೆಚ್ಚು ಆದ್ಯತೆ ನೀಡಬೇಕು. ಪ್ರಾಮಾಣಿಕ ಸೇವೆಯ ಮೂಲಕ ಪ್ರಯಾಣಿಕರ ವಿಶ್ವಾಸಗಳಿಸಬೇಕು ಎಂದರು.
ಕೊರೋನಾ ಸಮಯದಲ್ಲಿ ಆಟೋ ಚಾಲಕ ಮಾಲೀಕರು ಬಾಡಿಗೆ ಇಲ್ಲದೇ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದರು. ಈಗ ಸ್ವಲ್ಪ ಚೇತರಿಕೆ ಕಾಣುತ್ತಿದ್ದಾರೆ. ಬಸ್ಸಿನಲ್ಲಿ ಉಚಿತ ಪ್ರಯಾಣದ ಭಾಗ್ಯದಿಂದ ಆಟೋಗಳಿಗೆ ಬಾಡಿಗೆ ಇಲ್ಲದೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸಬೇಕಾಗಿದೆ. ಪ್ರತಿ ಹೋರಾಟಕ್ಕೆ ಆಟೋ ಚಾಲಕ-ಮಾಲಿಕರು ಸಕ್ರಿಯವಾಗಿ ಭಾಗವಹಿಸಿ, ಬೆಂಬಲ ನೀಡಬೇಕು ಎಂದರು.
ಇದನ್ನೂ ಓದಿ: Leopard Attack: ಕಾರನ್ನೇ ಅಟ್ಟಿಸಿಕೊಂಡು ಬಂದ ಚಿರತೆ; ಭಯಭೀತರಾದ ಯುವಕರು
ಶಿರಸಿಯಲ್ಲಿ ಸುಮಾರು 1200 ಆಟೋಗಳಿವೆ. ವಿಮೆ ಭರಿಸುವುದು ಕೆಲ ಆಟೋ ಚಾಲಕರಿಗೆ ಕಷ್ಟವಾಗುತ್ತಿದೆ. ದಾನಿಗಳು ನೆರವಿಗೆ ಬಂದು ಆಟೋ ಚಾಲಕ-ಮಾಲೀಕರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಹೃದಯದಿಂದ ಮಾಡಿದ ಕೆಲಸಕ್ಕೆ ಯಾವಾಗಲೂ ಆತ್ಮಸಂತೋಷವಿರುತ್ತದೆ. ಕಡುಬಡತನದಲ್ಲಿ ಹುಟ್ಟಿದ ನಾನು, ಸಮಾಜಕ್ಕೆ ಸಹಾಯ ಮಾಡುವ ಉದ್ದೇಶದಿಂದ ಚಾರಿಟೇಬಲ್ ಟ್ರಸ್ಟ್ ರಚಿಸಿ, ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇನೆ.
ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸಮಾಜವನ್ನು ಕಟ್ಟಿದ್ದಾರೆ. ಅವರ ಪ್ರೇರಣೆ ಮತ್ತು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಮಾಡಿದ ಸೇವೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿ, ನನ್ನ ದುಡಿಮೆಯ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಕ್ಕೆ ಮೀಸಲಿಡುತ್ತಿದ್ದೇನೆ ಎಂದರು.
ಕಷ್ಟದಲ್ಲಿದ್ದವರಿಗೆ ವಿಮೆ ನೀಡುತ್ತೇನೆ. ಸ್ವಲ್ಪ ದಿನ ನಂತರ ಎಲ್ಲರಿಗೂ ವಿಮೆ ನೀಡಬೇಕೆಂಬ ಯೋಜನೆ ಹಾಕಿಕೊಂಡಿದ್ದೇನೆ, ಇದಕ್ಕೆ ತಮ್ಮೆಲ್ಲರ ಸಹಾಯ ಅಗತ್ಯ. 30 ದಿನಗಳವರೆಗೆ ಪಾಸಿಂಗ್ ಯೋಜನೆ ಜಾರಿಯಲ್ಲಿರುತ್ತದೆ. ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಆಟೋ ಚಾಲಕ ಹಾಗೂ ಮಾಲೀಕರು ಅನಂತಮೂರ್ತಿ ಹೆಗಡೆ ಅವರಿಗೆ ಆಟೋ ರಕ್ಷಕ ಎಂಬ ಬಿರುದು ನೀಡಿ, ಸನ್ಮಾನಿಸಿ ಗೌರವಿಸಿದರು.
ಇದನ್ನೂ ಓದಿ: Jailer Movie: ಗೆದ್ದು ಬೀಗಿದ ʻತಲೈವಾʼ; ಬೆಂಗಳೂರಿನಲ್ಲಿ ‘ಜೈಲರ್’ಗೆ ಡಿಮ್ಯಾಂಡೋ ಡಿಮ್ಯಾಂಡ್!
ಆಟೋ ಚಾಲಕ ಮಾಲಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ ಗೌಡ, ನರೆಬೈಲ್ ಗ್ರೂಪ್ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಹೆಗಡೆ ದೊಡ್ನಳ್ಳಿ, ಅಂತಾರಾಷ್ಟ್ರೀಯ ಮಾನವ ಹಕ್ಕು ಆಯೋಗದ ಜಿಲ್ಲಾಧ್ಯಕ್ಷ ಮಂಜುನಾಥ ಮೊಗೇರ ಉಪಸ್ಥಿತರಿದ್ದರು.