Site icon Vistara News

15 ದಂಪತಿಗಳಿಗೆ ಡಿವೋರ್ಸ್​ ಕೊಡದ ರಾಯಚೂರು ಜಿಲ್ಲಾ ನ್ಯಾಯಾಲಯ; ‘ಜತೆಗೇ ಬದುಕಿ’ ಎಂದ ನ್ಯಾಯಾಧೀಶರು

Court Judgement

ರಾಯಚೂರು: ವಿಚ್ಛೇದನ ಬೇಕೇಬೇಕು ಎಂದು ಕೋರ್ಟ್​ ಮೆಟ್ಟಿಲೇರಿದ್ದ ಸುಮಾರು 15 ದಂಪತಿಗಳನ್ನು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಮತ್ತೆ ಒಂದುಗೂಡಿಸಿದೆ. ‘ಜತೆಗೇ ಬದುಕಿ ಹೋಗಿ’ ಎಂದು ಕಳಿಸಿದೆ. ಅವರ ವಿಚ್ಛೇದನಾ ಅರ್ಜಿಗಳ ವಿಚಾರಣೆಯನ್ನು ಕೈಬಿಟ್ಟಿದೆ. ಈ 15 ಜೋಡಿ ಒಂದಲ್ಲ ಒಂದು ಕಾರಣಕ್ಕೆ, ಅದೂ ಕ್ಷುಲ್ಲಕ ಕಾರಣ ಇಟ್ಟುಕೊಂಡು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷಗಳಿಂದಲೂ ವಿಚಾರಣೆ ನಡೆಯುತ್ತಲೇ ಇತ್ತು. ವಯಸ್ಸಾದ ದಂಪತಿಯೂ ಇದ್ದರು. ಈಗ ಅವರನ್ನೆಲ್ಲ ರಾಯಚೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಮತ್ತೆ ಒಂದು ಮಾಡಿದೆ. ಇದೊಂದು ಅಪರೂಪದ ಘಟನೆಯೇ ಆಗಿದೆ.

ಹೀಗೆ ಡಿವೋರ್ಸ್​​ಗೆ ಅರ್ಜಿ ಹಾಕಿದ ದಂಪತಿಯಲ್ಲಿ ಒಬ್ಬೊಬ್ಬರದೂ ಒಂದೊಂದು ಕಾರಣವಿತ್ತು. ಇವರೆಲ್ಲರಲಿ 74ವರ್ಷದ ವೃದ್ಧ ದಂಪತಿಯ ಪುನರ್ಮಿಲನ ವಿಶೇಷ ಎನ್ನಿಸಿದೆ. 74ವರ್ಷದ ಮಹಾದೇವ್​ ಮತ್ತು ಅವರ ಪತ್ನಿ ಲಕ್ಷ್ಮಿ ಆಸ್ತಿ ವಿಚಾರಕ್ಕೆ ಬೇರೆಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಇವರ ಸಂಬಂಧದಲ್ಲಿ ಒಡಕು ಮೂಡಿತ್ತು. ವೃದ್ಧೆ ಲಕ್ಷ್ಮಿಯನ್ನು ಆಕೆಯ ದಾಯಾದಿಗಳು ಪತಿ ಮಹಾದೇವ್ ವಿರುದ್ಧವೇ ಎತ್ತಿಕಟ್ಟಿದ್ದರು. 4ವರ್ಷಗಳ ಹಿಂದೆ ಲಕ್ಷ್ಮಿ ತನ್ನ ಪತಿಯೊಡನೆ ಜಗಳವಾಡಿ, ಬೇರೆಯಾದಾಗ ಮಹಾದೇವ್​ ವೃದ್ಧಾಶ್ರಮ ಸೇರಿಕೊಂಡಿದ್ದರು. ಇಷ್ಟು ವರ್ಷದಲ್ಲಿ ಲಕ್ಷ್ಮಿ ಆರೋಗ್ಯವೂ ಹದಗೆಟ್ಟಿತ್ತು. ಶಸ್ತ್ರಚಿಕಿತ್ಸೆಗೆ ಒಳಪಟ್ಟು ಬಲಗೈಯನ್ನೂ ಕಳೆದುಕೊಂಡಿದ್ದರು. ಈ ದಂಪತಿಯ ಮುನಿಸನ್ನು ಕೋರ್ಟ್ ಮರೆ ಮಾಡಿದೆ. ಇಳಿವಯಸ್ಸಿನ ದಂಪತಿ, ಜಡ್ಜ್​ ಎದುರು ಮತ್ತೆ ಹಾರ ಬದಲಿಸಿಕೊಂಡಿದ್ದಾರೆ.

ಹಾಗೇ 64 ವರ್ಷ ವಯಸ್ಸಿನ ಸತ್ಯನಾರಾಯಣ ಮತ್ತು ಪತ್ನಿ ಶಾಂತಮ್ಮ ಮಧ್ಯೆಯೂ ಕಿತ್ತಾಟವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರೂ ತಮ್ಮ ಹೆಣ್ಣು ಮಕ್ಕಳ ಮದುವೆ ಬಳಿಕ ದೂರವಾಗಿದ್ದರು. ಇನ್ನೊಬ್ಬ ದಂಪತಿ ನಾಗರಾಜ್​ ಮತ್ತು ಚಿತ್ರಾ ಕೂಡ ಮೂರು ವರ್ಷಗಳಿಂದ ವಿಚ್ಛೇದನಕ್ಕಾಗಿ ಅಲೆಯುತ್ತಿದ್ದರು. ಇವರಿಗೆ 14ವರ್ಷದ ಮಗ ಕೂಡ ಇದ್ದ. ಮನೆಕೆಲಸಕ್ಕೆ ಸಂಬಂಧಪಟ್ಟ ವಿಷಯಕ್ಕೆ ಮುನಿಸಿಕೊಂಡಿದ್ದರು. ಇವರನ್ನೂ ಕೋರ್ಟ್​​ನಲ್ಲಿ ಒಂದು ಮಾಡಲಾಗಿದೆ. ಹೀಗೆ ಚಿಕ್ಕಚಿಕ್ಕ ಕಾರಣಗಳಿಗೆ ಯಾರೆಲ್ಲ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೋ ಅವರನ್ನೆಲ್ಲರಿಗೂ ನ್ಯಾಯಾಧೀಶರು ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ: Birds Divorce: ಮನುಷ್ಯರು ಮಾತ್ರವಲ್ಲ‌, ಪಕ್ಷಿಗಳಲ್ಲೂ ಇದೆ ಡಿವೋರ್ಸ್ ಪದ್ಧತಿ; ಹೇಗೆ ಅನ್ನೋದೇ ಅಚ್ಚರಿ

ನಿತ್ಯವೂ ವಿಚ್ಛೇದನ ಕೇಸ್​ಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮಾರುತಿ ಬಗಾಡಿ ಅವರು ‘ಟಿವಿ ನೋಡೋ ವಿಚಾರ, ಗಂಡ ಮದ್ಯಪಾನ ಮಾಡುತ್ತಾನೆ ಎಂಬ ವಿಚಾರಕ್ಕೆಲ್ಲ ಕೂಡಲೇ ಬಂದು ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ. ಆದರೆ ಇಂಥ ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್​ಗೆ ಮುಂದಾಗುವುದನ್ನು ತಡೆಯಬೇಕು. ಪತಿ-ಪತ್ನಿ ಸಂಸಾರದ ಜವಾಬ್ದಾರಿ ಹೊರಬೇಕು. ಕೋಪ-ಜಗಳ ಸಾಮಾನ್ಯ. ಒಂದಷ್ಟು ವಿಷಯಗಳನ್ನು ಮನೆಯ ಹಿರಿಯರು, ಇತರ ಸದಸ್ಯರ ಜತೆಗೂಡಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Exit mobile version