ಬೆಂಗಳೂರು: ಭಯೋತ್ಪಾದಕನನ್ನು ಬೆಂಬಲಿಸಲು ಹೋಗಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲೇ ಏಕಾಂಗಿಯಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಯು.ಟಿ. ಖಾದರ್ ಅವರೇ ಮಂಗಳೂರಿನ ಘಟನೆಗೆ ಯಾರೂ ಬೆಂಬಲ ಕೊಡಬಾರದು ಎಂದಿದ್ದಾರೆ. ಯಾರೂ ಡಿ.ಕೆ. ಶಿವಕುಮಾರ್ ಪರ ನಿಲ್ಲುತ್ತಿಲ್ಲ ಎಂದು ಅದು ಹೇಳಿದೆ.
ʻʻಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಅತ್ಯಂತ ಖಂಡನಾರ್ಹ. ಇದು ಅತ್ಯಂತ ಹಾಸ್ಯಾಸ್ಪದ ಹೇಳಿಕೆಯೂ ಹೌದುʼʼ ಎಂದು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ʻʻಟೆರರಿಸ್ಟ್ ಎಂದೊಡನೆ ನಿಮಗ್ಯಾಕೆ ನೋವಾಗಿದೆ? ಅಂದರೆ ನೀವು ಟೆರರಿಸ್ಟ್ ಪರ ಇದ್ದಂತಲ್ಲವೇʼʼ ಎಂದು ಅವರು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು..
ʻʻಭಯೋತ್ಪಾದನೆ ಪರವಾಗಿ ನಿಂತ ಕಾಂಗ್ರೆಸ್ ಪರಿಸ್ಥಿತಿ ಈಗಾಗಲೇ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಜೊತೆಗಿನ ಸಂಬಂಧದ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ದೂಳು ತಿನ್ನುವಂತೆ ಮಾಡಿದೆ. ಅವರು ಮತಕ್ಕಾಗಿ ಓಲೈಕೆ ಮಾಡುತ್ತ ದೇಶದಲ್ಲಿ ಅಸ್ತಿತ್ವ ಕಳಕೊಂಡಿದ್ದಾರೆʼʼ ಎಂದು ಹೇಳಿದ ಛಲವಾದಿ, ಡಿ.ಕೆ.ಶಿವಕುಮಾರ್ ಅವರ ನಿಲುವನ್ನು ಸಿದ್ದರಾಮಯ್ಯರವರು ಬೆಂಬಲಿಸುತ್ತಾರಾ ಅಥವಾ ಆಕ್ಷೇಪಿಸುತ್ತಾರಾ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.
ಸಿ.ಟಿ.ರವಿ ವಿರುದ್ಧ ಹೇಳಿಕೆಗೆ ಖಂಡನೆ
ʻʻಕಾಂಗ್ರೆಸ್ ವಕ್ತಾರ ಮೈಸೂರಿನ ಲಕ್ಷ್ಮಣ್ ಅವರು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಬಗ್ಗೆ ಮಾತನಾಡಿ,ಅವರ ಅಪ್ಪ ಆಟೋ ಚಾಲಕರಾಗಿದ್ದರು. ಸಿ.ಟಿ.ರವಿ ಮೇಲೆ ಕ್ರಿಮಿನಲ್ ಕೇಸುಗಳಿವೆ ಎಂದು ತಿಳಿಸಿದ್ದಲ್ಲದೆ ಅವಹೇಳನಕಾರಿ ಮಾತನಾಡಿದ್ದಾರೆ. ಲಕ್ಷ್ಮಣ್ ಅವರಿಗೆ ಹುಚ್ಚು ಹಿಡಿದಿದೆಯೇ ಗೊತ್ತಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸಿ ಚೆಕಪ್ ಮಾಡಿಸುವುದು ಒಳ್ಳೆಯದು” ಎಂದು ಅಭಿಪ್ರಾಯಪಟ್ಟರು ಛಲವಾದಿ.
“ಸಿ.ಟಿ.ರವಿ ಅವರ ತಂದೆ ಯಾವತ್ತೂ ಆಟೋ ಡ್ರೈವರ್ ಆಗಿರಲಿಲ್ಲ. ಅವರೊಬ್ಬ ಜಮೀನ್ದಾರರಾಗಿದ್ದರು. ಅವರಿಗೆ ಕಾಫಿ ಎಸ್ಟೇಟ್ ಇತ್ತು. ಸಿ.ಟಿ.ರವಿ ಒಬ್ಬ ಹೋರಾಟಗಾರರು. ವಿದ್ಯಾರ್ಥಿ ಸಂಘಟನೆಗಳಿಂದ ಹೋರಾಟ ಮಾಡುತ್ತ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ಇವತ್ತು ರಾಷ್ಟ್ರಮಟ್ಟದ ನಾಯಕತ್ವವನ್ನು ಹೊಂದಿದ್ದು, ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಖಂಡನೀಯ” ಎಂದರು.
ʻʻಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರು ಎಂಬ ಕಾರಣಕ್ಕಾಗಿ ಈ ಹೇಳಿಕೆ ನೀಡಿದ್ದಾರೆ. ಸಿ.ಟಿ.ರವಿ ಅವರು ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಕಳಿಸಿದರೆ ಅದನ್ನು ತೆಗೆದುಕೊಳ್ಳಲು ಲಕ್ಷ್ಮಣ್ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಇಂಥ ಹೇಡಿತನ ಪ್ರದರ್ಶಿಸುವವರು ಸಿ.ಟಿ.ರವಿ ಅವರ ಬಗ್ಗೆ ಮಾತನಾಡುವುದು ಖಂಡನೀಯ. ಆ ಪಕ್ಷಕ್ಕೆ ಜನರು ಬುದ್ಧಿ ಕಲಿಸುತ್ತಾರೆʼʼ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ʻʻದೇಶದಲ್ಲಿ ಆದ ಭಯೋತ್ಪಾದನಾ ಕೃತ್ಯಗಳಿಂದ ದೇಶವು ಅಭಿವೃದ್ಧಿಯನ್ನು ಕಳಕೊಂಡಿದೆ ಎಂಬ ಪ್ರಜ್ಞೆ ಕಾಂಗ್ರೆಸ್ ಮುಖಂಡರಿಗೆ ಇನ್ನೂ ಬಂದಂತಿಲ್ಲ. ಬಿಜೆಪಿ ಉಗ್ರವಾದ ಮತ್ತು ದೇಶವನ್ನು ಅಭದ್ರಗೊಳಿಸುವ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ಮಾಡುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬದಲಾವಣೆಯೇ ಇದಕ್ಕೆ ಸ್ಪಷ್ಟ ಉದಾಹರಣೆ. ಪ್ರತಿದಿನ ಉಗ್ರರ ಜೊತೆ ಕಾಳಗ, ಮಿಲಿಟರಿಯವರನ್ನೇ ಸಾಯಿಸಿದ್ದು ಸೇರಿ ಎಷ್ಟೊಂದು ಸುದ್ದಿಗಳು ಬರುತ್ತಿದ್ದವು. ಈಗ ಅಲ್ಲಿ ಕಲ್ಲು ತೂರಾಟ, ಗಲಭೆ, ಗುಂಡಿನ ಕಾಳಗ ನಿಂತಿದೆ. ಹದ್ದುಬಸ್ತಿಗೆ ತರುವ ಕೆಲಸವನ್ನು ಮೋದಿ ಅವರ ನೇತೃತ್ವದ ಸರಕಾರ ಮಾಡಿದೆʼʼ ಎಂದು ಛಲವಾದಿ ಹೇಳಿದರು.
ಇದನ್ನೂ ಓದಿ | DK Shivakumar | ವೋಟಿಗಾಗಿ ಡಿಕೆಶಿ ಹೇಳಿಕೆ ದೇಶಕ್ಕೆ ಅಪಾಯಕಾರಿ: ಪ್ರಮೋದ್ ಮುತಾಲಿಕ್ ಖಂಡನೆ