ಬೆಂಗಳೂರು: ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಬೆಂಗಳೂರಿನ ಇಂದಿರಾ ಕ್ಯಾಂಟೀನ್ (Indira Canteen)ಗಳಿಗೆ ಮರುಜೀವ ಸಿಕ್ಕಿದೆ. ಫುಲ್ ಮೆನು ಸಿದ್ಧವಾಗಿದೆ. ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಬೆಳಗ್ಗೆಯೇ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಒಂದು ಇಂದಿರಾ ಕ್ಯಾಂಟೀನ್ನಲ್ಲಿ ಉಪ್ಪಿಟ್ಟು-ಕೇಸರಿಬಾತ್ ಸವಿದಿದ್ದಾರೆ. ಅಲ್ಲಿಗೆ ಬಂದ ಸಾರ್ವಜನಿಕರ ಜತೆ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆಯೇ ಬೆಂಗಳೂರು ಟೂರ್ಗೆ ಹೊರಟರು. ಮೊದಲು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ಗೆ ಬಂದಿದ್ದಾರೆ. ಅಲ್ಲಿ ಬಂದು ತಿಂಡಿ ಕೊಡುವಂತೆ ಕೇಳಿದ್ದಾರೆ. ಆದರೆ ಅಲ್ಲಿ ಅದಾಗಲೇ ತಿಂಡಿ ಖಾಲಿಯಾಗಿತ್ತು. ತಿಂಡಿ ಖಾಲಿಯಾಗಿದೆ ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಮತ್ತು ಅವರ ಜತೆಗಿದ್ದವರು ಅಲ್ಲಿಂದ ತೆರಳಿದ್ದಾರೆ. ‘ಇಲ್ಲಿ ತಿಂಡಿ ಖಾಲಿಯಾಗಿ ನಡೀರಪ್ಪ’ ಎನ್ನುತ್ತಲೇ ಡಿ.ಕೆ.ಶಿವಕುಮಾರ್ ಅಲ್ಲಿಂದ ಹೊರಬಿದ್ದಿದ್ದಾರೆ.
ಅಲ್ಲಿಂದ ಹೊರಟ ಡಿ.ಕೆ.ಶಿವಕುಮಾರ್ ದಾಸಹರಳ್ಳಿ ಮೆಟ್ರೋ ಸ್ಟೇಶನ್ ಬಳಿ ಇದ್ದ ಇಂದಿರಾ ಕ್ಯಾಂಟೀನ್ಗೆ ಬಂದಿದ್ದಾರೆ. ಅಲ್ಲಿ ಕುಳಿತು ಉಪ್ಪಿಟ್ಟು-ಕೇಸರಿಬಾತ್ ತಿಂದಿದ್ದಾರೆ. ಹಾಗೇ, ತಿಂಡಿ ತಿನ್ನುತ್ತಿದ್ದ ಸಾರ್ವಜನಿಕರನ್ನು ಮಾತಾಡಿಸಿದ್ದಾರೆ. ‘ನೀವು ಇಲ್ಲಿ ಎಷ್ಟು ದುಡ್ಡುಕೊಟ್ಟು ತಿಂಡಿ ತಿನ್ನುತ್ತಿದ್ದೀರಿ’ ಎಂದೂ ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಡಿಸಿಎಂ ಡಿ.ಕೆ.ಶಿವಕುಮಾರ್, ‘ಇಂದಿರಾ ಕ್ಯಾಂಟೀನ್ ಊಟದಲ್ಲಿ ವ್ಯತ್ಯಾಸವಿದ್ದರೆ ಕರೆ ಮಾಡಲು ಕೊಡಲಾಗಿರುವ ಫೋನ್ ನಂಬರ್ಗೆ ಖುದ್ದು ಅವರೇ ಕರೆ ಮಾಡಿದ್ದಾರೆ. ಆದರೆ ನಂಬರ್ ಸಂಪರ್ಕಕ್ಕೆ ಸಿಗಲಿಲ್ಲ. ಈ ಬಗ್ಗೆಯೂ ಡಿಕೆಶಿ ವಿಚಾರಿಸಿದ್ದಾರೆ.
ಇದನ್ನೂ ಓದಿ: DK Shivakumar : ಇನ್ನೊಂದು ವರ್ಷಕ್ಕೆ ಸಿಎಂ ಬದಲಾವಣೆ? ಡಿ.ಕೆ. ಶಿವಕುಮಾರ್ ಸಿಎಂ?; ಕೇದಾರನಾಥ ಶ್ರೀ ಮಾತಿನ ಅರ್ಥವೇನು?
ಮೆನು ಕೇಳಿದ ಡಿ.ಕೆ.ಶಿವಕುಮಾರ್
ಕ್ಯಾಂಟೀನ್ ಸಿಬ್ಬಂದಿಯನ್ನೂ ಡಿ.ಕೆ.ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ಬೆಳಗ್ಗೆ-ಮಧ್ಯಾಹ್ನ-ಸಂಜೆ ಏನೆಲ್ಲ ಅಡುಗೆ ಮಾಡ್ತೀರಿ? ಹಣ ಎಷ್ಟು ಪಡೆಯುತ್ತಿದ್ದೀರಿ? ಐದು ರೂಪಾಯಿ ಇದ್ದಿದ್ದಕ್ಕೆ ಹತ್ತು ರೂಪಾಯಿ ಪಡೆಯುತ್ತಿದ್ದೀಯಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಎಲ್ಲ ಪ್ರಶ್ನೆಗಳಿಗೂ ಕ್ಯಾಂಟೀನ್ ಸಿಬ್ಬಂದಿ ವಿವರಣೆ ನೀಡಿದ್ದಾರೆ.