ಬೆಂಗಳೂರು: ದಿಲ್ಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ಬೆಂಗಳೂರಿನ ಎಲ್ಲಾ ೨೪೩ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು (Namma clinic) ಸ್ಥಾಪಿಸಿ ಅರೋಗ್ಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಬೇಕು ಎಂಬ ರಾಜ್ಯ ಸರಕಾರದ ಪ್ಲ್ಯಾನ್‌ಗೆ ಹಿನ್ನಡೆಯಾಗಿದೆ.
ನಮ್ಮ ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸಲು ಯಾವ ವೈದ್ಯರೂ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಮೂರು ತಿಂಗಳಿನಿಂದ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗೆ ಸಣ್ಣ ಪ್ರತಿಕ್ರಿಯೆಯೂ ಸಿಕ್ಕಿಲ್ಲ.
ಇದೇ ಡಿಸೆಂಬರ್ 10ರೊಳಗೆ ಬೆಂಗಳೂರಿನಲ್ಲಿ 100 ಕ್ಲಿನಿಕ್ ಆರಂಭಕ್ಕೆ ಸರಕಾರ ಮತ್ತು ಬಿಬಿಎಂಪಿ ಸಜ್ಜಾಗಿದೆ. ಆದರೆ, ವೈದ್ಯರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಮುಂದೇನು ಎಂಬ ಪ್ರಶ್ನೆಯೊಂದಿಗೆ ಸರಕಾರ ಕಾಯುತ್ತಿದೆ.
ನಮ್ಮ ಕ್ಲಿನಿಕ್ ಯೋಜನೆಯಡಿಯಲ್ಲಿ ಪ್ರತಿ ಆಸ್ಪತ್ರೆಗೆ ಒಬ್ಬ ವೈದ್ಯ, ಲ್ಯಾಬ್ ಟೆಕ್ನಿಷಿಯನ್ ಹಾಗೂ ಒಬ್ಬ ನರ್ಸ್ ನೇಮಕ ಮಾಡಬೇಕಾಗಿದೆ. ವೈದ್ಯರಿಗೆ 47 ಸಾವಿರ,ನರ್ಸ್, ಲ್ಯಾಬ್ ಟೆಕ್ನಿಷೀಯನ್ ಗೆ 15 ಸಾವಿರ ರೂಪಾಯಿ ವೇತನ ನಿಗದಿ ಮಾಡಲಾಗಿದೆ. 243 ವಾರ್ಡ್ ಗಳಲ್ಲೂ ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಬೇಕಾಗಿದೆ.
ಆದರೆ, ಬಿಬಿಎಂಪಿ ಆರಂಭಿಸಲಿರುವ ಕ್ಲಿನಿಕ್ ಗೆ ವೈದ್ಯರ ಕೊರತೆ ಎದುರಾಗಿದೆ. ಯಾರೂ ಇಲ್ಲಿನ ೪೭ ಸಾವಿರ ರೂ. ವೇತನಕ್ಕೆ ಸೇವೆ ಸಲ್ಲಿಸಲು ಬರುತ್ತಿಲ್ಲ. ಹೀಗಾಗಿ ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಬಿಬಿಎಂಪಿ ಮುಂದಾಗಿದೆ. ಹೀಗಾಗಿ ಸೋಮವಾರ ಅರ್ಜಿ ಆಹ್ವಾನ ಮಾಡಿದೆ.
ಆದರೆ, ಇದಕ್ಕೂ ಸೂಕ್ತ ಪ್ರತಿಕ್ರಿಯೆ ದೊರೆಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ವೈದ್ಯರ ಕೊರತೆಯಾದ್ರೆ ಎರಡನೇ ಹಂತದ ಕ್ಲಿನಿಕ್ ಆರಂಭ ಮುಂದೂಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ನಡುವೆ, ರಾಜ್ಯ ಸರಕಾರ ನಮ್ಮ ಕ್ಲಿನಿಕ್‌ಗಳಲ್ಲಿ ಉಚಿತವಾಗಿ ಮಧುಮೇಹ ಪರೀಕ್ಷೆ ನಡೆಸಲು ಮುಂದಾಗಿದೆ. ಇದನ್ನು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು.
ಇದನ್ನೂ ಓದಿ | Namma clinic | ನಮ್ಮ ಕ್ಲಿನಿಕ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ