ಬೆಂಗಳೂರು: ಕೋಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತುರ್ತು ಸೇವೆಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘವು ಆ.17ರಂದು ದೇಶಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಗೆ (Doctors Protest) ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪತ್ರ ಬರೆದಿದೆ. ವೈದ್ಯಾಧಿಕಾರಿಗಳು ದಿನದ 24/7 ಗಂಟೆ ಬಡ ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಹಾಗೂ ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗವು ಇಡೀ ಪ್ರಪಂಚವನ್ನೇ ಬಾಧಿಸಿದ ಸಂದರ್ಭದಲ್ಲಿ ವೈದ್ಯರು ಹಗಲಿರುಳು ಎನ್ನದೇ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿದ್ದರು.
ಆದರೆ ಆ.9 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಯುವ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಘೋರ ಅಪರಾಧವಾಗಿದ್ದು, ಇದು ಕಾನೂನಿನ ವೈಫಲ್ಯವನ್ನು ಎತ್ತಿ ಹಿಡಿಯುತ್ತದೆ. ಅಲ್ಲದೇ ಈ ಪ್ರಕರಣವು ವೈದ್ಯರ ಮನೋಸ್ಥೈರ್ಯವನ್ನು ಕುಗ್ಗುವಂತೆ ಮಾಡಿದ್ದು, ಇದನ್ನು ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಗಂಭೀರವಾಗಿ ಪರಿಗಣಿಸಿದೆ.
ಇದನ್ನೂ ಓದಿ | Kolkata Doctor Murder Case: ಟ್ರೈನಿ ವೈದ್ಯೆಯ ಹತ್ಯೆ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಭಾರೀ ಲಾಠಿಚಾರ್ಜ್
ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಪ್ರಕರಣಗಳು ಮರುಕಳಿಸದಂತೆ ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸಿ, ವೈದ್ಯರ ಮನೋಸ್ಥೆರ್ಯವನ್ನು ಹೆಚ್ಚಿಸಿ, ನಿರ್ಭೀತಿಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ನೀಡಲು ಅವಕಾಶ ಕಲ್ಪಿಸಬೇಕೆಂದು ಎಂದು ಆಗ್ರಹಿಸಿದೆ.
ಇನ್ನು ಯುವ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ತುರ್ತುಸೇವೆ ಹೊರತುಪಡಿಸಿ, ಇತರೆ ಎಲ್ಲಾ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ, ಆ. 17ರಂದು ಭಾರತೀಯ ವೈದ್ಯಕೀಯ ಸಂಘವು ಪ್ರತಿಭಟನೆಗೆ ಕರೆ ನೀಡಿದ್ದು, ಈ ಸಂಘವು ಮುಖ್ಯ ವಾಹಿನಿಯಲ್ಲಿ ಬರುವ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಈ ಪ್ರತಿಭಟನೆಗೆ ಕಪ್ಪು ಪಟ್ಟಿಯನ್ನು ಧರಿಸಿ ತುರ್ತು ಸೇವೆಯನ್ನು ಮಾತ್ರ ನೀಡುತ್ತಾ, ಬೆಂಬಲವನ್ನು ಸೂಚಿಸುತ್ತದೆ ಎಂದು ವೈದ್ಯಾಧಿಕಾರಿಗಳ ಸಂಘವು ತಿಳಿಸಿದೆ.
ತುರ್ತು ಸೇವೆ ಬಿಟ್ಟು ಎಲ್ಲಾ ಸೇವೆ ಬಂದ್
ಪ್ರತಿಭಟನೆ ಬಗ್ಗೆ ಡಾ.ಶ್ರೀನಿವಾಸ್ ಮಾತನಾಡಿ, ನಾಳೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ದೇಶ ವ್ಯಾಪ್ತಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕೂಡ ಓಪಿಡಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದೇವೆ. ಕರ್ತವ್ಯದ ವೇಳೆ ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ, ಕೊಲೆ ಆಗಿದೆ. ಪ್ರಕರಣ ಖಂಡಿಸಿ ಒಟ್ಟು ಒಂದು ಲಕ್ಷಕ್ಕೂ ಅಧಿಕ ವೈದ್ಯರು ಪ್ರತಿಭಟನೆ ಮಾಡುತ್ತಾರೆ.
ಖಾಸಗಿ ಅಸ್ಪತ್ರೆ. ಮೆಡಿಕಲ್ ಕಾಲೇಜುಗಳು ಪ್ರತಿಭಟನೆಗೆ ಬೆಂಬಲ ನೀಡಿವೆ. ಸರ್ಕಾರಿ ವೈದ್ಯರು ಕೂಡ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ ಅಂತ ಹೇಳಿದ್ದಾರೆ. ನಾಳೆ ಬೆಳಗ್ಗೆ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡುತ್ತೇವೆ, ಸಾವಿರಾರು ವೈದ್ಯರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಇದನ್ನೂ ಓದಿ | Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ವಿವೇಕ್ ದೊರೈ ಮಾತನಾಡಿ, ವೈದ್ಯೆಯನ್ನು ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡುತ್ತೇವೆ. ತುರ್ತು ಸೇವೆ ಬಿಟ್ಟು ಎಲ್ಲಾ ಸೇವೆಗಳನ್ನು ಬಂದ್ ಮಾಡುತ್ತೇವೆ. 6 ಸಾವಿರ ಸರ್ಕಾರಿ ವೈದ್ಯರು ಕಪ್ಪುಪಟ್ಟಿ ಧರಿಸಿ ತುರ್ತು ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದರು.