Site icon Vistara News

Documents Digitalization: ಶ್ರೀನಿವಾಸ್‌ ಹೆಬ್ಬಾರ್‌ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ

Shrinivas Hebbar sirsi Documents Digitization

#image_title

ಶಿರಸಿ: ಉದ್ಯಮಿಯಾಗಿ ಜನಮನ ಗೆದ್ದಿರುವ, ಜನರಿಗೆ ಜೀವ ಜಲವನ್ನು ಒದಗಿಸುವಂತಹ ಪುಣ್ಯದ ಕೆಲಸ ಮಾಡುತ್ತಿರುವ ಶ್ರೀನಿವಾಸ ಹೆಬ್ಬಾರ್ ಅವರು ಮತ್ತೊಂದು ಸಾಮಾಜಿಕ ಸೇವೆ ಮಾಡಿದ್ದಾರೆ. ಶಿರಸಿ ಕಂದಾಯ ಉಪ ವಿಭಾಗದ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ (Documents Digitalization) ಮಾಡುವ ಮೂಲಕ ಜನರಿಗೆ ಉಪಯುಕ್ತ ಎನಿಸುವಂಥ ಸಹಾಯ ಮಾಡಿದ್ದಾರೆ. ಇವರು ವಿಸ್ತಾರ ಮೀಡಿಯಾ ಸಂಸ್ಥೆಯ ನಿರ್ದೇಶಕರೂ ಹೌದು.

ತಮ್ಮ ಸ್ವಂತ ಹಣದಿಂದ ಕೆರೆ ಅಭಿವೃದ್ಧಿ ಮಾಡುತ್ತಿರುವ ಶ್ರೀನಿವಾಸ ಹೆಬ್ಬಾರ್‌ ಅವರು, ಶಿರಸಿ ಕಂದಾಯ ಉಪ ವಿಭಾಗದ ಸುಮಾರು 6 ಲಕ್ಷಗಳಷ್ಟು ಕಂದಾಯ ದಾಖಲೆಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿಸಿ ಅವುಗಳನ್ನು ಕೋಡಿಫೈಗೊಳಿಸಿ ಡಿಜಿಟಲೀಕರಣದ ಸರಳೀಕೃತ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ.‌

ಇಲಾಖೆಯ ಕಚೇರಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಒದಗಿಸಿದ ಈ ಮಹತ್ಕಾರ್ಯಕ್ಕಾಗಿ ಉಪ ವಿಭಾಗಾಧಿಕಾರಿ ದೇವರಾಜ್‌ ಆರ್ ಅವರು ಶ್ರೀನಿವಾಸ ಹೆಬ್ಬಾರ ಅವರನ್ನು ಸನ್ಮಾನಿಸಿದರು.

ಶಿರಸಿ ಉಪ ವಿಭಾಗ ವ್ಯಾಪ್ತಿಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳಿಗೆ ಸೇರಿದ ಹಳೆಯ ಮಂಜೂರಿ ಆದೇಶಗಳು, ಅರೆನ್ಯಾಯಿಕ ತೀರ್ಪುಗಳು, ಆರ್.ಆರ್.ಟಿ ಪ್ರಕರಣಗಳಿಗೆ ಸಂಬಂಧಿತ ದಾಖಲೆಗಳು ಕಂದಾಯ ಇಲಾಖೆಯ ಹಳೆಯ ಮತ್ತು ಮೂಲ ದಾಖಲೆಗಳನ್ನು ಒಂದಿಷ್ಟು ಚೀಲಗಳಲ್ಲಿ ಕಟ್ಟಿಡಲಾಗಿತ್ತು. ಅಲ್ಲದೇ ಇನ್ನೂ ಅನೇಕ ದಾಖಲೆಗಳು ಧೂಳು ಹಿಡಿದುಕೊಂಡು ಅಸ್ತವ್ಯಸ್ತವಾಗಿ ಬಿದ್ದಿದ್ದವು. ಇದರಿಂದಾಗಿ ಜನರಿಗೆ ಕಾರಣಾಂತರಗಳಿಂದ ಹಳೆಯ ದಾಖಲೆಗಳ ಪ್ರತಿ ಬೇಕೆಂದರೆ ವಾರ, ಹದಿನೈದು ದಿನ, ತಿಂಗಳುಗಟ್ಟಲೆ ಕಾಲಾವಕಾಶ ಪಡೆದು ಪೂರೈಸಬೇಕಾದ ಪ್ರಸಂಗವಿತ್ತು. ಅನ್ಯ ಕಾರ್ಯದ ನಿಮಿತ್ತ ಎಸಿ ಕಚೇರಿಗೆ ಹೋಗಿದ್ದ ಶ್ರೀನಿವಾಸ ಹೆಬ್ಬಾರ ಅವರಿಗೆ ಈ ವಿಚಾರ ಗೊತ್ತಾದ ಮೇಲೆ ಎಸಿ ದೇವರಾಜ್‌ ಅವರೊಡನೆ ಸಮಾಲೋಚಿಸಿ ಈ ಎಲ್ಲ ದಾಖಲೆಗಳುಳ್ಳ ಕಡತಗಳನ್ನೇ ಸ್ಕ್ಯಾನ್ ಮಾಡಿ, ಅವುಗಳನ್ನು ಕೋಡಿಫೈಗೊಳಿಸಿ, ಆ ಕೋಡ್‌ಗಳುಳ್ಳ ಕಡತಗಳಿಗೆ ಟ್ಯಾಗ್ ಲಗತ್ತಿಸಿ ಹಳೆಯ ಯಾವುದೇ ಕಾಲದ ದಾಖಲೆಯೂ ಕ್ಷಣಾರ್ಧದಲ್ಲಿ ಸಿಗುವಂತೆ ಮಾಡಿಕೊಡಲು ನಿರ್ಧರಿಸಲಾಯಿತು.

ಬೆಳಗಾವಿಯ ಇಂಥದೇ ಕೆಲಸ ಮಾಡಿಕೊಡುವ ಸ್ವಯಂ ಸೇವಾ ಸಂಸ್ಥೆಯ ಮಾಹಿತಿ ಪಡೆದು ಜನ ಸಾಮಾನ್ಯರ ಅನುಕೂಲಕ್ಕಾಗಿ ಆ ಸಂಸ್ಥೆಗೆ ಕಾರ್ಯಭಾರ ವಹಿಸಿಕೊಡಲಾಗಿತ್ತು. ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಮೂರ್ನಾಲ್ಕು ದೊಡ್ಡ ಸ್ಕ್ಯಾನರ್‌ಗಳ ಮೂಲಕ ಬೆಳಗಾವಿ ಸ್ವಯಂ ಸೇವಾ ಸಂಸ್ಥೆಯ ನೌಕರರು ಶಿರಸಿ ಕಂದಾಯ ಉಪ ವಿಭಾಗದ ಸಮಗ್ರ ದಾಖಲೆಗಳ ಕಡತಗಳನ್ನು ಡಿಜಿಟಲೀಕರಣಗೊಳಿಸಿದ್ದಾರೆ.

ಇದು ರಾಜ್ಯದಲ್ಲಿ ಕಂದಾಯ ಉಪ ವಿಭಾಗವೊಂದರ ಸಮಗ್ರ ಕಡತಗಳ ಡಿಜಿಟಲೀಕರಣದ ಪ್ರಥಮ ಪ್ರಯೋಗವಾಗಿದೆಯೆಂದು ಖ್ಯಾತಿ ಪಡೆದಿದೆಯಲ್ಲದೇ, ದಾನಿಯೊಬ್ಬರು ಮುಂದೆ ಬಂದು ನೆರವೇರಿಸಿಕೊಟ್ಟಿರುವುದು ಮಾದರಿಯಾಗಿದೆ. ಈ ಪ್ರಯೋಗವನ್ನು ಜಿಲ್ಲಾಧಿಕಾರಿ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶ್ರೀನಿವಾಸ ಹೆಬ್ಬಾರ್ ಅವರು ಮೊದಲಿನಿಂದಲೂ ಸಾಮಾಜಿಕ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ನೂರಾರು ಕೆರೆಗಳ ಅಭಿವೃದ್ಧಿ, ದೇವಸ್ಥಾನ ಅಭಿವೃದ್ಧಿ, ಬಡ ಕುಟುಂಬಕ್ಕೆ ಸಹಾಯ ಹೀಗೆ ಒಬ್ಬ ಜನಪ್ರತಿನಿಧಿ ಮಾಡಬೇಕಾದ ಕರ್ತವ್ಯವನ್ನು ಯಾವುದೇ ಪ್ರತಿಫಲ ಬಯಸದೆ ಮಾಡಿಕೊಂಡು ಬಂದಿದ್ದಾರೆ. ಈಗ ಸರ್ಕಾರದಿಂದ ಆಗಬೇಕಿರುವ ಕೆಲಸವನ್ನು ಹೆಬ್ಬಾರ್ ಅವರು ತಮ್ಮ ಶ್ರಮದ ಹಣದಿಂದ ಮಾಡಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: Congress ticket : ಇನ್ನೂ ಕೋಲಾರ ಕ್ಷೇತ್ರ ಖಾಲಿ ಇದೆ, ಸಿದ್ದರಾಮಯ್ಯ ಬಂದೇ ಬರ್ತಾರೆ; ಅಭಿಮಾನಿಗಳ ವಿಶ್ವಾಸ

Exit mobile version