ಬೀದರ್: ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗುತ್ತಿದ್ದು, ಸೂಕ್ತ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬಸವಕಲ್ಯಾಣ ಪಟ್ಟಣದಲ್ಲಿ ಪುಟ್ಟ ಮಗುವಿನ ಮೇಲೆ ಬೀದಿ ನಾಯಿ ದಾಳಿ (Dog Attack) ಮಾಡಿ ಗಂಭೀರ ಪ್ರಮಾಣದಲ್ಲಿ ಗಾಯಗಳನ್ನು ಮಾಡಿದೆ.
ನಗರದ ಗಾಡವಾನ್ ಗಲ್ಲಿಯಲ್ಲಿ ನಾಯಿ ದಾಳಿ ನಡೆದಿದ್ದು, ಅಸ್ಮಾ ಸಮೀರ್ ಶೇಕ್ ಎಂಬ ೨ ವರ್ಷದ ಬಾಲಕಿ ನಾಯಿ ದಾಳಿಗೆ ತುತ್ತಾದವಳು. ಈಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಮುಖ ಹಾಗೂ ಮೈ-ಕೈ ಮೇಲೆ ತೀವ್ರ ತರನಾದ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
36 ಹೊಲಿಗೆ ಹಾಕಿ ಚಿಕಿತ್ಸೆ
ಈಕೆ ಮನೆಯಿಂದ ಹೊರಗೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಏಕಾಏಕಿ ನಾಯಿಯೊಂದು ದಾಳಿ ನಡೆಸಿದ್ದು, ಬಾಲಕಿ ನೆಲಕ್ಕೆ ಬಿದ್ದಿದ್ದಾಳೆ. ತಪ್ಪಿಸಿಕೊಳ್ಳಲೂ ಆಗಲಿಲ್ಲ. ಬಾಲಕಿ ಕಿರುಚಾಟ ಕೇಳಿ ಪೋಷಕರು ಹಾಗೂ ಸ್ಥಳೀಯರು ಬಂದು ನಾಯಿಯನ್ನು ಓಡಿಸಿದ್ದು, ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ, ಅಷ್ಟರಲ್ಲಿ ಬಾಲಕಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ವೈದ್ಯರು ೩೬ ಹೊಲಿಗೆಯನ್ನು ಹಾಕಿದ್ದಾರೆಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ.
ಬೀದಿ ನಾಯಿ ಹಾವಳಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಇವುಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Jeep Accident | ಸಿಎಂ ಬೆಂಗಾವಲು ವಾಹನ ಪಲ್ಟಿ, ದಾರಿಯಲ್ಲಿ ಹೋಗುತ್ತಿದ್ದ ತಾಯಿ-ಮಗನಿಗೆ ಗಾಯ; ಕಾಂಗ್ರೆಸ್ ಪ್ರತಿಭಟನೆ