ಕುರುಗೋಡು: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ (Dog Bite) ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾದನಹಟ್ಟಿ ಗ್ರಾಮದ ಸುರಕ್ಷಿತ (3) ಮತ್ತು ಶಾಂತಕುಮಾರ್ (7) ಮೃತ ಮಕ್ಕಳಾಗಿದ್ದಾರೆ. ಇನ್ನೊಬ್ಬ ಬಾಲಕಿಗೆ ನಾಯಿ ಕಚ್ಚಿದ್ದು ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾಳೆ. ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ನಾಯಿಯೊಂದು ದಾಳಿ ಮಾಡಿತ್ತು. ಆಗ ಸುರಕ್ಷಿತಾಳ ಮುಖಕ್ಕೆ ನಾಯಿ ಕಚ್ಚಿತ್ತು. ಜತೆಗೆ ಶಾಂತಕುಮಾರ್ ಕೈಗೂ ಕಚ್ಚಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ಹಾಗೂ ಶಾಂತಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನ.21ರಂದು ಸುರಕ್ಷಿತಾ ಮತ್ತು ನ.22ರಂದು ಶಾಂತಕುಮಾರ್ ಮೃತಪಟ್ಟಿದ್ದಾರೆ.
ನಾಯಿಯನ್ನು ಕೊಂದ ಗ್ರಾಮಸ್ಥರು
ಮಕ್ಕಳ ಮೇಲೆ ದಾಳಿ ಮಾಡಿದ ವೇಳೆ ಅಲ್ಲೇ ಇದ್ದ ಸ್ಥಳೀಯರಿಗೆ ಕಚ್ಚಲು ನಾಯಿ ಮುಂದಾಗಿತ್ತು. ಗ್ರಾಮಸ್ಥರು ಆತಂಕದಿಂದ ಆ ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ. ಆತಂಕದಲ್ಲಿರುವ ಗ್ರಾಮಸ್ಥರಿಗೆ ಡಿಎಚ್‌ಒ ಜನಾರ್ದನ ನೇತೃತ್ವದ ತಂಡ ಭೇಟಿ ನೀಡಿ ಜಾಗೃತಿ ಮೂಡಿಸಿದೆ. ಗ್ರಾಮದ ನಾಯಿಗಳಿಗೆ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಂಡಿದೆ. ನಾಯಿ ಕಡಿತ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ಇಲಾಖೆ ತಂಡ ತಿಳಿಸಿದೆ.
ಇದನ್ನೂ ಓದಿ | Muslim college | ವಕ್ಫ್ ಅಧ್ಯಕ್ಷರ ಹೇಳಿಕೆ ವೈಯಕ್ತಿಕ, ಮಹಿಳಾ ಕಾಲೇಜಿನ ಪ್ರಸ್ತಾಪವಿಲ್ಲ ಎಂದ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ