Site icon Vistara News

Dog lovers | ವಿಮಾನದಲ್ಲಿ ನಾಯಿ ಮರಿ ಒಯ್ಯಲು ಅನುಮತಿ ನಿರಾಕರಣೆ; ಪ್ರವಾಸವನ್ನೇ ರದ್ದು ಮಾಡಿದ ದಂಪತಿ

Dog lovers

ದೇವನಹಳ್ಳಿ: ಪ್ರೀತಿಯಿಂದ ಸಾಕಿದ್ದ ನಾಯಿ ಮರಿಯನ್ನು ವಿಮಾನದಲ್ಲಿ ಕರೆದೊಯ್ಯಲು ವಿಮಾನಯಾನ ಸಂಸ್ಥೆ ಸಿಬ್ಬಂದಿ ಅವಕಾಶ ನೀಡಲಿಲ್ಲ ಎಂದು ಬೆಂಗಳೂರಿನ ಕುಟುಂಬವೊಂದು (Dog lovers) ಉತ್ತರ ಭಾರತ ಪ್ರವಾಸವನ್ನೇ ರದ್ದು ಮಾಡಿದ್ದಾರೆ.

ಸಚಿನ್ ಶೆಣೈ ಪ್ರವಾಸ ರದ್ದು ಮಾಡಿರುವ ಪ್ರಯಾಣಿಕ. ಬೆಂಗಳೂರಿನ ನಿವಾಸಿ ಸಚಿನ್ ಶೆಣೈ, ಪತ್ನಿ ಉಮಾ ಮತ್ತು ಮಗಳು ಆರ್ಯ ಜತೆಗೆ ಅವರ ಮುದ್ದಿನ ನಾಯಿ ಫ್ಲಫಿಯೊಂದಿಗೆ 12 ದಿನಗಳ ಉತ್ತರ ಪ್ರವಾಸಕ್ಕೆ ಹೊರಟ್ಟಿದ್ದರು. ಕಳೆದ ಶನಿವಾರ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ AI 503 ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಬೇಕಿತ್ತು.

ಪ್ರಾರಂಭದಲ್ಲಿ ನಾಯಿ ಮರಿ ಜತೆ ಪ್ರಯಾಣಿಸಲು ವಿಮಾನಯಾನ ಸಂಸ್ಥೆ ಸಿಬ್ಬಂದಿ ಅವಕಾಶ ನೀಡಿದ್ದಾರೆ. ಆದರೆ, ವಿಮಾನ ಹತ್ತುವ ಸಮಯದಲ್ಲಿ ನಾಯಿಮರಿ ಪ್ರಯಾಣಕ್ಕೆ ಪೈಲಟ್‌ ನಿರಾಕರಿಸಿದ್ದಾರೆ. ಇದರಿಂದಾಗಿ ಕುಟುಂಬದ ಸದಸ್ಯನಂತಿದ್ದ ಮುದ್ದಿನ ಫ್ಲಫಿ ಬಿಟ್ಟು ಹೋಗಲು ಮನಸಾಗದೆ ತಮ್ಮ ಪ್ರವಾಸವನ್ನೇ ಕುಟುಂಬ ರದ್ದು ಮಾಡಿದೆ.

ನಾಯಿಗೆ ತಮ್ಮ ಜತೆ ಪ್ರಯಾಣಿಸಲು ಅನುಮತಿ ನೀಡದ ವಿಮಾನಯಾನ ಸಂಸ್ಥೆಯ ಬಗ್ಗೆ ಬೇಸರಗೊಂಡ ಸಚಿನ್ ಶೆಣೈ, ಏರ್‌ಪೋರ್ಟ್‌ನಲ್ಲಿ ವಿಡಿಯೊ ಮಾಡಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ವಿಮಾನದಲ್ಲಿ ನಿಯಮಗಳ ಪ್ರಕಾರ 5 ಕೆಜಿ ತೂಕದ ಬ್ಯಾಗ್‌ಗಳನ್ನು ಜತೆಯಲ್ಲಿ ತೆಗೆದುಕೊಂಡು ಹೋಗಬಹುದು. 4.2 ಕಿ.ಗ್ರಾಂ. ತೂಕದ ಫ್ಲಫಿಯನ್ನು ವಿಮಾನದ ಕ್ಯಾಬಿನ್ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ಇತ್ತು. ನಾಯಿ ಮರಿಗೆ ಎಲ್ಲ ರೀತಿಯ ತಪಾಸಣೆ ಮಾಡಲಾಗಿತ್ತು ಹಾಗೂ ಅದಕ್ಕೆ ಬೋರ್ಡಿಂಗ್ ಪಾಸ್ ಸಹ ನೀಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ 4 ಗಂಟೆ ಕಾದರೂ ನಾಯಿಮರಿ ಯಾರಿಗೂ ಕಿರಿ ಕಿರಿ ನೀಡಿಲ್ಲ. ಆದರೆ, ವಿಮಾನದ ಕ್ಯಾಪ್ಟನ್ ಚೋಪ್ರಾ ನಾಯಿಮರಿಯ ಪ್ರಯಾಣವನ್ನು ನಿರಾಕರಿಸಿದ್ದಾರೆ ಎಂದು ಸಚಿನ್‌ ಶೆಣೈ ವಿಡಿಯೊದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ, ಸಚಿನ್ ಶೆಣೈ ಅವರ ದೆಹಲಿ ಪ್ರಯಾಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ನಾಯಿಮರಿಯ ಪ್ರಯಾಣಕ್ಕೆ ಅನುಮತಿ ನೀಡುವ ಅಂತಿಮ ತೀರ್ಮಾನ ವಿಮಾನದ ಪೈಲಟ್‌ಗೆ ಇರುತ್ತದೆ. ಇದರಲ್ಲಿ ನಮ್ಮೆದೇನೂ ತಪ್ಪಿಲ್ಲ ಎಂದಿದೆ.

ಇದನ್ನೂ ಓದಿ | DK Shivakumar | ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಗೆ ಖರ್ಗೆ ಆಕ್ರೋಶ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ

Exit mobile version