ಕೋಲಾರ/ಹಾಸನ/ಕೊಡಗು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಮಟಂಪಲ್ಲಿ ಗ್ರಾಮದಲ್ಲಿ ಶ್ವಾನಗಳು, ಕುರಿಗಳ ಮೇಲೆ ದಾಳಿ (Dog attack) ಮಾಡಿವೆ. ನಾಯಿಗಳ ದಾಳಿಗೆ 14 ಕುರಿಗಳು ಮೃತಪಟ್ಟಿದ್ದರೆ, 11 ಕುರಿಗಳು ಗಾಯಗೊಂಡಿವೆ. ಇವು ಗ್ರಾಮದ ಟಿ. ವಿ ಬಾಬುರೆಡ್ಡಿ ಎಂಬುವವರಿಗೆ ಸೇರಿದ್ದು, ಭಾನುವಾರ ರಾತ್ರಿ ನಾಯಿಗಳು ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.
ಮುಂಜಾನೆ ಕುರಿ ದೊಡ್ಡಿಗೆ ಬಂದು ನೋಡಿದಾಗ ಕುರಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 14 ಕುರಿಗಳ ಸಾವಿನಿಂದ ಸುಮಾರು 1 ಲಕ್ಷ ರೂ.ಗೂ ಹೆಚ್ಚು ನಷ್ಟವನ್ನುಂಟು ಮಾಡಿದೆ. ಗೌನಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರ್ಮಿಕನ ಮೇಲೆ ಕಾಡಾನೆ ದಾಳಿ
ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ ಮುಂದುವರಿದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೂಸೂರು ಕಾರೆಕಾಡು ಎಂಬಲ್ಲಿ ಭಾನುವಾರ ರಾತ್ರಿ ಕಾಡಾನೆಯು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದೆ. ಮಾದು ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಫಿ ತೋಟದಲ್ಲಿ ಕೆಲಸ ಮಾಡುವ ಮಾದು, ಪತ್ನಿ ಮೀನಾ ಜತೆಗೆ ಅಂಗಡಿಗೆ ಹೋಗಿ ವಾಪಸ್ ಬರುತ್ತಿದ್ದರು. ಈ ವೇಳೆ ಕಾಫಿ ತೋಟದಲ್ಲಿ ಅಡ್ಡಾಡುತ್ತಿದ್ದ ಕಾಡಾನೆ ದಿಢೀರ್ ದಾಳಿ ಮಾಡಿದೆ. ಕೂದಲೆಳೆಯ ಅಂತರದಲ್ಲಿ ಮೀನಾ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡ ಮಾದು ಅವರನ್ನು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ದೇವಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರೇಡಿಯೊ ಕಾಲರ್ ಅಳವಡಿಕೆ
ಕೊಡುಗು ಮಾತ್ರವಲ್ಲದೆ ಹಾಸನ ಜಿಲ್ಲೆಯಲ್ಲೂ ಕಾಡಾನೆಗಳ ಉಪಟಳ ಮಿತಿಮೀರಿದೆ. ಹೀಗಾಗಿ ಅರಣ್ಯ ಇಲಾಖೆಯು ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸಿದ್ದತೆ ಮಾಡಿಕೊಂಡಿದೆ. ಇಂದಿನಿಂದ ಮೇ 25ರ ವರೆಗೆ ಸಕಲೇಶಪುರ, ಬೇಲೂರು ವಲಯಗಳಲ್ಲಿ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಯಲಿದೆ.
ಇದನ್ನೂ ಓದಿ: Weather Report : ರಾಜ್ಯದಲ್ಲಿ ಇನ್ನೆರಡು ದಿನ ತಲೆ ಬಿಸಿ; ಏರಲಿದೆ ತಾಪಮಾನ, ಅಲ್ಲಲ್ಲಿ ಇರಲಿದೆ ಮಳೆ ಅಬ್ಬರ
ಮೂರು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಿಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು ಮತ್ತು ಮಹೇಂದ್ರ, ದುಬಾರೆ ಆನೆ ಶಿಬಿರದಿಂದ ಅಜ್ಜಯ್ಯ, ಪ್ರಶಾಂತ ಮತ್ತು ವಿಕ್ರಮ ಆನೆಗಳನ್ನು ಕರೆತರಲಾಗಿದೆ. ತಾತ್ಕಾಲಿಕವಾಗಿ ಸ್ಥಾಪಿಸಿರುವ ಬೇಲೂರು ವಲಯದ, ಬಿಕ್ಕೋಡು ಸಸ್ಯಕ್ಷೇತ್ರದ ಕ್ಯಾಂಪ್‌ನಲ್ಲಿ ಇರಿಸಲಾಗಿದೆ. ಇನ್ನು ಸಾರ್ವಜನಿಕರು ಅರಣ್ಯ ಇಲಾಖೆ ಸೂಚನೆಗಳನ್ನು ಪಾಲಿಸಿ ಕಾರ್ಯಾಚರಣೆಗೆ ಸಹಕರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.