ರಾಯಚೂರು: ದೇವರ ಹುಂಡಿಗೆ ದಾನ ಮಾಡೋದು ಅಸಹ್ಯಕರವಾದದ್ದು ಎನಿಸುತ್ತದೆ. ದೇವರಿಗೆ ಹಾಕೋದು ದಾನವಲ್ಲ. ನಾವು ಮಾಡಿರುವ ಪಾಪಗಳ ಪ್ರಾಯಶ್ಚಿತ್ತದ ಒಂದು ಮುಖ, ಇದು ಪಾಪವನ್ನು ರಿನಿವಲ್ ಮಾಡತಕ್ಕಂತದ್ದು. ನಾನು ಇಷ್ಟೊಂದು ಪಾಪ ಮಾಡಿದ್ದೀನಿ, ಇಷ್ಟು ಜನರನ್ನು ಹಾಳು ಮಾಡಿದ್ದೀನಿ, ದಯವಿಟ್ಟು ಕ್ಷಮಿಸಿ. ಹೊಸದಾಗಿ ಪಾಪ ಮಾಡಲು ಅವಕಾಶ ಮಾಡಿಕೊಡು ಅನ್ನೋದು ಇದರ ಉದ್ದೇಶವಾಗಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ (Kum Veerabhadrappa) ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದೆ ರೋಜಾ, ರಜಾಕ್ ಇವೆಲ್ಲಾ ಶುರುವಾಗುತ್ತವೆ. ಕುರಾನ್ ನಮಗೆ ಯಾಕೆ ಮುಖ್ಯವೆಂದರೆ, ಒಳ್ಳೆಯದು ಎಲ್ಲಿದೆ ಅದನ್ನು ನಾವು ಸ್ವೀಕರಿಸಬೇಕು ಎಂದು ಬಸವಣ್ಣ ಹೇಳಿದ್ದಾನೆ. ಮೊಹಮ್ಮದ್ ಪೈಗಂಬರ್ ನಮ್ಮವರು, ಯೇಸು ಕ್ರಿಸ್ತನು ನಮ್ಮವರು. ತಿರುಪತಿಯಲ್ಲಿ ನೋಡಿದರೆ ನಿಜಕ್ಕೂ ಅತ್ಯಂತ ಅಸಹ್ಯಕರವಾದದ್ದು. ಯಾವುದು ಅಂದರೆ ದೇವರ ಹುಂಡಿಗೆ ಕೋಟಿಗಟ್ಟಲೆ ಹಣ, ಬಂಗಾರ ಹಾಕೋದು. ಇವರೆಲ್ಲರೂ ನಿಜವಾಗಿಯೂ ಈ ದೇಶದ ದೊಡ್ಡ ಡ್ಯಾಶ್ ಡ್ಯಾಶ್… ನೀವು ಮುಂದೆ ಏನಾದರೂ ತುಂಬಿಕೊಳ್ಳಿ ನೋ ಪ್ರಾಬ್ಲಮ್ ಎಂದು ಹೇಳಿದ್ದಾರೆ.
ಮಹಿಳೆಯರು ಮತ್ತು ಪುರುಷರ ನಡುವೆ ಸಣ್ಣದೊಂದು ಗೆರೆ ಇರುತ್ತದೆ. ಪುರುಷರು ಮತ್ತು ಮಹಿಳೆಯರಿಗೂ ಅಷ್ಟೊಂದು ವ್ಯತ್ಯಾಸಗಳಿಲ್ಲ. ಹಾರ್ಮೋನ್‌ಗಳಿಂದ ಇಬ್ಬರಲ್ಲಿ ವ್ಯತ್ಯಾಸಗಳಿವೆ. ಮಹಿಳೆಯರಲ್ಲೂ ಪುರುಷರ ಹಾರ್ಮೋನ್‌ಗಳಿರುತ್ತವೆ. ಹೆಂಡತಿ ಹೆಸರೇನು ಎಂದಾಗ ಪುರುಷ ನಾಚಿಕೊಳ್ಳುತ್ತಾನೆ, ಅದು ಹೆಣ್ತನ. ಅರ್ಧನಾರೀಶ್ವರ ಎಂಬ ಪರಿಕಲ್ಪನೆ ವೈಜ್ಞಾನಿಕವಾಗಿದೆ. ಮಹಿಳೆಯರು ಯಾವ ಸಮಾಜದಲ್ಲಿ ಹೆಚ್ಚು ಭಾಗವಹಿಸುತ್ತಾರೋ ಆ ಸಮಾಜ ಸುಭದ್ರವಾಗಿರುತ್ತದೆ. ಯಾವ ಸಮಾಜದಲ್ಲಿ ಮಹಿಳೆಯರ ಭಾಗವಹಿಸುವಿಕೆ ಇರಲ್ಲವೋ, ಅದು ನಿರ್ಲಕ್ಷ್ಯಕ್ಕೆ ಒಳಗಾದ ಸಮಾಜ ಎಂದು ತಿಳಿಸಿದರು.
ಇದನ್ನೂ ಓದಿ | Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು
ಗ್ಯಾರಂಟಿಗಳನ್ನು ಹಾಡಿಹೊಗಳಿದ ಸಾಹಿತಿ
ಮನೆಯೊಳಗೆ ಬಂದಿಯಾಗಿ ಇರುವವರಿಗೆ ಸರ್ಕಾರ ಫ್ರೀ ಬಸ್ ಬಿಟ್ಟಿತು. ಆಗ ಮಹಿಳೆಯರು ಮೈಚಳಿ ಬಿಟ್ಟು ಮನೆಯಿಂದ ಹೊರಬಂದರು. ಅದು ನಿಜವಾದ ಮಹಿಳಾ ದಿನಾಚರಣೆ. ಕೊಟ್ಟೂರು ಜಾತ್ರೆಯಲ್ಲಿ ಎಲ್ಲೆಲ್ಲೂ ಮಹಿಳೆಯರೇ. ಇವೆಲ್ಲ ಬಹಳ ಹೆಮ್ಮೆಪಡುವಂತ ವಿಷಯಗಳು ಎಂದು ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಸಾಹಿತಿ ಕುಂ ವೀರಭದ್ರಪ್ಪ ಹಾಡಿಹೊಗಳಿದ್ದಾರೆ.