Site icon Vistara News

Education Department: ಶಿಥಿಲ ಶಾಲಾ ಕೊಠಡಿಗಳ ಬಳಕೆ ಬೇಡ: ಶಿಕ್ಷಣ ಇಲಾಖೆ ಸುತ್ತೋಲೆ

Dilapidated school room

#image_title

ಬೆಂಗಳೂರು: ರಾಜ್ಯದಲ್ಲಿ‌ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಅಲ್ಲಲ್ಲಿ‌ ಮನೆಗಳು ಬಿದ್ದಿರುವ ಉದಾಹರಣೆಗಳು ಇವೆ. ಈ ನಡುವೆ ಮೇ 29ರಿಂದ ಶಾಲೆಗಳು ಆರಂಭವಾಗುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಿಥಿಲಾವಸ್ಥೆಯ ಶಾಲಾ ಕೊಠಡಿಗಳನ್ನು ಬಳಸಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education Department) ಸುತ್ತೋಲೆ ಹೊರಡಿಸಿದೆ.

ಮಕ್ಕಳ ಬೇಸಿಗೆ ರಜೆ ಮುಗಿದಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲು ಎರಡೇ ದಿನ ಬಾಕಿ ಇದೆ.‌ ಆದರೆ, ರಾಜ್ಯದೆಲ್ಲೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆ ಶಾಲಾ ಕೊಠಡಿಗಳು ಕುಸಿದು ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಶಿಥಿಲ ಕೊಠಡಿಗಳನ್ನು ಬಳಸಬಾರದು. ಅಗತ್ಯ ಮುಂಜಾಗ್ರತೆ ಕ್ರಮಗಳೊಂದಿಗೆ ಶಾಲಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ‌ ಹೊರಡಿಸಲಾಗಿದೆ.

ದುರಸ್ತಿಗೆ ಕ್ರಮ ಕೈಗೊಳ್ಳಬೇಕು

ಮಳೆಯಿಂದ ಶಾಲೆಯ ಕೊಠಡಿಗಳು, ಶೌಚಾಲಯ, ಕಾಂಪೌಂಡ್ ಶಿಥಿಲಗೊಂಡಲ್ಲಿ ಅವುಗಳನ್ನು ಬಳಸದಂತೆ ಸೂಚಿಸಲಾಗಿದೆ. ಇನ್ನು ಮಳೆಯಿಂದ ಪ್ರವಾಹ ಉಂಟಾಗಿ ಶಾಲೆಗಳಿಗೆ ಬಂದು ಹೋಗಲು ಸಮಸ್ಯೆ, ಶಾಲಾ ಕೊಠಡಿಗಳು ಜಲಾವೃತವಾಗಿ ಒಳಗೆ ನೀರು ಸಂಗ್ರಹವಾಗಿದ್ದರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಉಪನಿರ್ದೇಶಕರು, ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಮುಖ್ಯ ಶಿಕ್ಷಕರು ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: UPSC Prelims 2023: ಮೇ 28ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದಲೇ ಮೆಟ್ರೋ ಸಂಚಾರ ಆರಂಭ

ಇ‌ನ್ನು ಬಿಸಿಯೂಟದಲ್ಲಿ ಸಿಹಿ ಉಪಾಹಾರ ವಿತರಿಸಬೇಕು. ಜೂನ್ 1 ರಿಂದ ತರಗತಿಗಳನ್ನು ಆರಂಭಿಸಬೇಕು.‌ ಮಳೆಯಿಂದಾಗಿ ಹಳ್ಳ, ಕೊಳ್ಳ, ನದಿಗಳು ತುಂಬಿದ್ದು, ರಸ್ತೆಗಳು ಹಾಳಾಗಿ ಮಕ್ಕಳು ಶಾಲೆಗೆ ಬರಲು ತೊಂದರೆಯಾಗಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ.

Exit mobile version