ಕಾರವಾರ/ಬೆಳಗಾವಿ: ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿ ಭಾಗದ ಮನಮೋಹಕ ದೂಧ್ ಸಾಗರ್ ಜಲಪಾತವನ್ನು (Doodh Sagar Falls) ನೋಡುವುದೇ ಒಂದು ಚೆಂದ. ಇದು 310 ಮೀಟರ್ (1012 ಅಡಿ) ಎತ್ತರದಿಂದ ಧುಮುಕುತ್ತದೆ. ಅಲ್ಲದೆ, ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದು ಎಂಬ ಖ್ಯಾತಿಯನ್ನೂ ಪಡೆದಿದೆ. ಆದರೆ, ಇಲ್ಲಿ ಭಾನುವಾರ (ಜುಲೈ 16)ರಿಂದ ದೂಧ್ ಸಾಗರ್ ಪ್ರವೇಶವನ್ನು ನಿರಾಕರಿಸಿ (Doodh Sagar Ban) ಆದೇಶಿಸಲಾಗಿದೆ. ಆದರೆ, ಈ ವಿಷಯ ಗೊತ್ತಿಲ್ಲದೆ ಟ್ರಕ್ಕಿಂಗ್‌ಗೆ (Trucking) ಬಂದಿದ್ದ ರಾಜ್ಯದ ಯುವಕರಿಗೆ ಗೋವಾ ಪೊಲೀಸರು (Goa Police) ಬಸ್ಕಿ ಹೊಡೆಸಿ (sit ups) ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರತಿಭಟನೆಯನ್ನು ನಡೆಸಲಾಗಿದೆ.
ಈ ಜಲಪಾತವು ಪಶ್ಚಿಮ ಘಟ್ಟದ ಭಗವಾನ್ ಮಹಾವೀರ ಉದ್ಯಾನ (Bhagwan Mahaveer Park) ಮತ್ತು ಮೊಲ್ಲೆಮ್ ರಾಷ್ಟ್ರೀಯ ಉದ್ಯಾನದ (Mollem National Park) ಸಮೀಪವೂ ಇದೆ. ಜತೆಗೆ ದಟ್ಟ ಕಾಡಿನಿಂದ ಸುತ್ತುವರಿದಿದೆ. ಹೀಗಾಗಿ ಇದು ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಈ ಕಾರಣಕ್ಕಾಗಿಯೇ ಅನೇಕರು ಇಲ್ಲಿಗೆ ಬರುತ್ತಾರೆ. ಜತೆಗೆ ರೈಲ್ವೆ ಟ್ರ್ಯಾಕ್‌ನಲ್ಲಿ (Railway Track) ನಡೆಯುವುದರಿಂದ ಹಿಡಿದು ಜಲಪಾತದ ವೈಭೋಗವನ್ನು ಕಣ್ತುಂಬಿಕೊಳ್ಳುವುದು ಎಂದರೆ ಎಲ್ಲರಿಗೂ ಬಲು ಇಷ್ಟ. ಇದೇ ಕಾರಣಕ್ಕೆ ಈ ವೀಕೆಂಡ್‌ಗೆ ರಾಜ್ಯದ ಹಲವು ಯುವಕರು ಪ್ಲ್ಯಾನ್ ಮಾಡಿಕೊಂಡು ಹೋಗಿದ್ದರು. ಆದರೆ, ಅವರ ಗ್ರಹಚಾರ ಕೆಟ್ಟಿತ್ತು. ಪ್ರವೇಶ ನಿಷೇಧವಾಗಿತ್ತು. ಆದರೂ ಅಕ್ರಮವಾಗಿ ಪ್ರವೇಶ ಮಾಡಿದ್ದರಿಂದ ರೈಲ್ವೆ ಹಾಗೂ ಗೋವಾ ಪೊಲೀಸರು ಈ ಯುವಕರಿಗೆ ಬಸ್ಕಿ ಹೊಡೆಯುವ ಶಿಕ್ಷೆಯನ್ನು ವಿಧಿಸಿದ್ದಾರೆ.
ದೂಧ್ ಸಾಗರ್ ಜಲಪಾತ ವೀಕ್ಷಣೆ ಹಾಗೂ ಟ್ರಕ್ಕಿಂಗ್‌ಗೆ ಭಾನುವಾರದಿಂದ ನಿಷೇಧ ಹೇರಿ ಗೋವಾ ಸರ್ಕಾರ ಸರ್ಕಾರ ಆದೇಶಿಸಿತ್ತು. ಅಲ್ಲದೆ, 50ಕ್ಕೂ ಹೆಚ್ಚು ಪೊಲೀಸರು, ಅರಣ್ಯ ಸಿಬ್ಬಂದಿ (Forest Staff) ಹಾಗೂ ರೈಲ್ವೇ ಪೊಲೀಸ್ (Goa Railway Police) ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿತ್ತು. ಇವರು ಇಲ್ಲಿ ಪಹರೆ ಕಾಯುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಯಾರೂ ಸಹ ಅತ್ತ ಸುಳಿಯದಂತೆ ನೋಡಿಕೊಳ್ಳುತ್ತಿದ್ದಾರೆ.
ಕರ್ನಾಟಕ ಪ್ರವಾಸಿಗರಿಗೆ ಬಸ್ಕಿ ಶಿಕ್ಷೆ
ಬಂದರು ರಾಜ್ಯದ ಯುವಕರು
ದೂಧ್ ಸಾಗರ್ ಪ್ರವೇಶ ನಿಷೇಧದ ಸುಳಿವೂ ಇಲ್ಲದ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಇತರ ಜಿಲ್ಲೆಗಳ ನೂರಾರು ಯುವಕರು ಅಲ್ಲಿಗೆ ಬಂದಿದ್ದಾರೆ. ಹಾಗೇ ಟ್ರಕ್ಕಿಂಗ್ ಮಾಡಿಕೊಂಡು ರೈಲ್ವೆ ಹಳಿ ಮೇಲೆ ನಡೆದು ಬಂದಿದ್ದಾರೆ. ಈ ವೇಳೆ ಅಲ್ಲಿನ ರೈಲ್ವೆ ಮತ್ತು ಗೋವಾ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ಯುವಕರನ್ನು ಅರ್ಧಕ್ಕೇ ತಡೆದು ಬಸ್ಕಿ ಹೊಡೆಸಿ, ವಾಪಸ್ ಕಳುಹಿಸಲಾಗಿದೆ.
ಗೋವಾ ಪೊಲೀಸರು ಹೇಳೋದೇನು?
ದೂಧ್ ಸಾಗರದಲ್ಲಿ ಆಳವಾದ ಜಾಗದಲ್ಲಿ ಇಳಿಯದಂತೆ ಪೊಲೀಸರು ಎಚ್ಚರಿಕೆ ನೀಡಿದರೂ ಕೇಳದೇ ಇರುವ ಹಿನ್ನೆಲೆಯಲ್ಲಿ ಅವರ ಮೇಲೆ ಲಾಠಿ ಚಾರ್ಜ್ ಮಾಡಿ ಬಸ್ಕಿ ಹೊಡೆಸಿದ್ದಾರೆ ಎಂದು ಗೋವಾ ಪೊಲೀಸರು ಹೇಳುತ್ತಿದ್ದಾರೆ.
ದೂಧ್ ಸಾಗರ್ ಫಾಲ್ಸ್ ಬಳಿ ಕನ್ನಡಿಗ ಪ್ರವಾಸಿಗರ ಪ್ರತಿಭಟನೆ
ಇದನ್ನೂ ಓದಿ:Electricity load shedding : ಈ ಮಳೆಗಾಲ ಮುಗಿಯುವುದರೊಳಗೇ ಲೋಡ್ ಶೆಡ್ಡಿಂಗ್?
ಪ್ರವಾಸಿಗರ ಪ್ರತಿಭಟನೆ
ಬಸ್ಕಿ ಹೊಡೆಸಿದ ಗೋವಾ ಪೊಲೀಸರ ಕ್ರಮ ಖಂಡಿಸಿದ ಪ್ರವಾಸಿಗರು ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ (Tourist protest) ನಡೆಸಿದ್ದಾರೆ. ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.