ಬೆಂಗಳೂರು: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ಜನ ಪ್ರಕಾಶನ (ಜನ ಸಂಸ್ಕೃತಿ ಅಧ್ಯಯನ ಪ್ರಕಾಶನ) ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರ 132ನೇ ಜಯಂತಿ ಮತ್ತು ಎಚ್.ಟಿ.ಪೋತೆ ಅವರು ರಚಿಸಿರುವ ‘ಎಲ್ಲರ ಅಂಬೇಡ್ಕರ್’ ಕೃತಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 20ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ.
ಎಲ್ಲರ ಅಂಬೇಡ್ಕರ್ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಕುರಿತು ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್. ನಾಗಮೋಹನದಾಸ್ ಅವರು ಮಾತನಾಡಲಿದ್ದಾರೆ. ಪ್ರೊ. ಬಿ. ಕೃಷ್ಣ ಟ್ರಸ್ಟ್‌ನ ಮುಖ್ಯಸ್ಥರಾದ ಇಂದಿರಾ ಕೃಷ್ಣಪ್ಪ, ಚಿಂತಕರು ಮತ್ತು ಸಾಹಿತಿಗಳಾದ ಡಾ. ಜಯದೇವಿ ಗಾಯಕ್ವಾಡ್, ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಂಘದ ಅಧ್ಯಕ್ಷರಾದ ಡಿ.ಚಂದ್ರಶೇಖರಯ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ. ಸತೀಶ್ ಕುಮಾರ್ಎ ಸ್. ಹೊಸಮನಿ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಎಂ. ರಾಮಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕೃತಿಯ ಕರ್ತೃ, ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, ಜನ ಪ್ರಕಾಶನದ ಬಿ. ರಾಜಶೇಖರ ಮೂರ್ತಿ, ಗ್ರಾಮ ಭಾರತ ಸಾಂಸ್ಕೃತಿಕ ಸಂಘಟನೆಯ ಕಿಗ್ಗ ರಾಜಶೇಖರ್ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರವಿ ದೊಡ್ಡಮಲೆ ಮತ್ತು ತಂಡದವರು ಹೋರಾಟದ ಹಾಡುಗಳನ್ನು ಹಾಡಲಿದ್ದಾರೆ.
ಕಾರ್ಯಕ್ರಮ ಮತ್ತು ಕೃತಿಯ ಉದ್ದೇಶ
ದೇಶದಲ್ಲಿನ ಅಸಮಾನತೆ, ಜಾತಿ ತಾರತಮ್ಯ-ಅಸ್ಪೃಶ್ಯತೆ, ಲಿಂಗತಾರತಮ್ಯ, ಒಟ್ಟಾರೆ ಶ್ರೇಣೀಕೃತ ಸಮಾಜದ ವಿರುದ್ಧ, ಭಾರತದಲ್ಲಿ ವೈಜ್ಞಾನಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಹೊಸಕಿ ಹಾಕಿದ ಮನುಸ್ಮೃತಿ ವಿರುದ್ಧ ಸಮರ ಸಾರಿ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ, ಆಧುನಿಕ ಭಾರತಕ್ಕೆ ಅಗತ್ಯವಾದ ಸಂವಿಧಾನ ರೂಪಿಸುವುದರಲ್ಲಿ ನಿರ್ಣಾಯಕ ಪಾತ್ರವಹಿಸಿ ‘ಸಂವಿಧಾನ ಶಿಲ್ಪಿ ಎನಿಸಿಕೊಂಡವರು ಅಂಬೇಡ್ಕರರು. ಹೀಗಾಗಿಯೇ ಶತ ಶತಮಾನಗಳಿಂದ ಜಾತಿ-ಅಸ್ಪೃಶ್ಯತೆಯ ಸಂಕೋಲೆಗಳಿಂದ ದಲಿತ ಸಮುದಾಯದವರು ಹೊರ ಬರುತ್ತಾ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು, ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನಾತ್ಮಕವಾಗಿ ಬುನಾದಿ ಹಾಕಿಕೊಟ್ಟಿದ್ದ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಸವಲತ್ತುಗಳನ್ನು ಇಲ್ಲವಾಗಿಸುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಮೀಸಲಾತಿ ವರ್ಗೀಕರಣದ ಹೆಸರಿನಲ್ಲಿ ಪರಸ್ಪರ ದಲಿತ-ದಲಿತರಲ್ಲೇ ಅಸಹನೆ ಉಂಟುಮಾಡಲಾಗುತ್ತಿದೆ. ದಲಿತ ಹಿಂದುಳಿತ ವಿದ್ಯಾರ್ಥಿ ವೇತನ ಮೊಟಕುಗೊಳಿಸಲಾಗುತ್ತಿದೆ. ದಲಿತರ ಸಬಲಿಕರಣಕ್ಕೆಂದೇ ಇದ್ದ ಯೋಜನೆಗಳನ್ನು ಇಲ್ಲವಾಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ದಲಿತರಲ್ಲಿ ಐಕ್ಯತೆ ಮೂಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‌ರವರ ವಿಚಾರಧಾರೆಯನ್ನು ಪುನರ್ ಅಧ್ಯಯನ ಮಾಡುವ ಅಗತ್ಯವಿದೆ. ಅದರಲ್ಲೂ ವಿದ್ಯಾರ್ಥಿ-ಯುವಜನರಲ್ಲಿ ಅಂಬೇಡ್ಕರ್‌ರವರ ಅರಿವನ್ನು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿಯೇ ಈ ಬಾರಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ 132ನೇ ಜಯಂತಿ ಅಂಗವಾಗಿ ‘ಜನ ಪ್ರಕಾಶನ’ (ಜನ ಸಂಸ್ಕೃತಿ ಅಧ್ಯಯನ ಮತ್ತು ಪ್ರಕಾಶನ) ದಿಂದ ಪ್ರಕಟಿಸಿರುವ, ಡಾ. ಎಚ್.ಟಿ.ಪೋತೆಯವರು ರಚಿಸಿರುವ ‘ಎಲ್ಲರ ಅಂಬೇಡ್ಕರ್’ (ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅರಿವಿನ ಕಥನ)ವನ್ನು ಜನರತ್ತ ಕೊಂಡೊಯ್ಯಲು ನಾವು-ನೀವು ‘ಎಲ್ಲರ ಅಂಬೇಡ್ಕರ್’ ಅರಿವಿನಾಂದೋಲನಕ್ಕೆ ಕೈ ಜೋಡಿಸೋಣ ಎಂದಿದ್ದಾರೆ ಮಾವಳ್ಳಿ ಶಂಕರ್.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಇಂದು ಅಂಬೇಡ್ಕರ್ ಜಯಂತಿ; ಸಂವಿಧಾನ ಶಿಲ್ಪಿ ಆಡಿದ ಮಾತುಗಳಲ್ಲಿನ ಕೆಲವು ಮುತ್ತುಗಳು ಇಲ್ಲಿವೆ