Site icon Vistara News

Ashwath Narayan: ಡಾ.ಸಿ.ಎನ್.ಅಶ್ವತ್ಥನಾರಾಯಣ ಜನ್ಮದಿನ; ಮಲ್ಲೇಶ್ವರದ ವಿವಿಧೆಡೆ ಸಂಭ್ರಮಾಚರಣೆ

Dr. C.N. Ashwathnarayan's birthday; Celebrations at various places in Malleswaram constituency

#image_title

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ (Ashwath Narayan) ಅವರ 54ನೇ ಹುಟ್ಟುಹಬ್ಬವನ್ನು ಮಲ್ಲೇಶ್ವರ ಕ್ಷೇತ್ರದ ವಿವಿಧೆಡೆ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಗುರುವಾರ ಸಂಭ್ರಮದಿಂದ ಆಚರಿಸಿದರು. ಸಚಿವರು ಎಲ್ಲರೊಂದಿಗೂ ಖುಷಿಯಿಂದ ಬೆರೆತು, ಶುಭಾಶಯಗಳನ್ನು ಸ್ವೀಕರಿಸಿದರು.

ಬೆಳಗ್ಗೆ 6 ಗಂಟೆಗೆ ಆರಂಭವಾದ ಜನ್ಮದಿನ ಆಚರಣೆಯು ಆರ್.ಎಂ.ವಿ ಉದ್ಯಾನ, ಡಾ.ಶಿವಪ್ರಸಾದ್ ಉದ್ಯಾನ, ಸ್ಯಾಂಕಿ ಕೆರೆ, ಸುಬ್ರಹ್ಮಣ್ಯ ನಗರ, ಪ್ಯಾಲೇಸ್ ಗುಟ್ಟಹಳ್ಳಿ ಮತ್ತು ಮಲ್ಲೇಶ್ವರಂ 8ನೇ ಅಡ್ಡರಸ್ತೆಗಳಲ್ಲಿ ನಡೆಯಿತು. ಅಭಿಮಾನಿಗಳು ಕೇಕ್ ಕತ್ತರಿಸಿ ಜನರಿಗೆ ವಿತರಿಸಿದರು, ಜತೆಗೆ ಎಲ್ಲೆಡೆ ಆಗಮಿಸಿದ್ದವರಿಗೆ ಉಪಾಹಾರ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಮಲ್ಲೇಶ್ವರಂ 8ನೇ ಅಡ್ಡರಸ್ತೆಯಲ್ಲಿ ಅಲ್ಲಿನ ಬೀದಿಬದಿ ವ್ಯಾಪಾರಿಗಳು ಸಚಿವರ ಹುಟ್ಟುಹಬ್ಬ ಏರ್ಪಡಿಸಿ, ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಿಸಿದರು. ಜತೆಗೆ ಅವರೆಲ್ಲ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ನೋಟ್ ಬುಕ್ ಮತ್ತು ಬ್ಯಾಗ್ ವಿತರಿಸಿದರು.

ಇದನ್ನೂ ಓದಿ | Consumer Court : 66 ವರ್ಷದ ವಿದ್ಯಾರ್ಥಿಗೆ ಸರಿಯಾಗಿ ಪಾಠ ಮಾಡದೆ ನಿರ್ಲಕ್ಷ್ಯ; ಕಂಪ್ಯೂಟರ್‌ ಸೆಂಟರ್‌ಗೆ ಕೋರ್ಟ್‌ ದಂಡ!

ಸಚಿವ ಅಶ್ವತ್ಥನಾರಾಯಣ ಅವರು ಯತಿರಾಜ ಮಠಕ್ಕೆ ತೆರಳಿ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸ್ಯಾಂಕಿ ಉದ್ಯಾನದಲ್ಲಿ ವಾಯುವಿಹಾರಿಗಳ ಜತೆ ಒಂದು ಗಂಟೆಗೂ ಹೆಚ್ಚು ಹೊತ್ತು ಕಳೆದು, ಶುಭಾಶಯಗಳನ್ನು ಸ್ವೀಕರಿಸಿದರು. ಸುಬ್ರಹ್ಮಣ್ಯ ನಗರದಲ್ಲಿ ಸಚಿವರ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಸುಬ್ರಹ್ಮಣ್ಯ ನಗರ ಕ್ರಿಕೆಟ್ ಕ್ಲಬ್ ಏರ್ಪಡಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿ ಕಾವೇರಿ ಕೇದಾರನಾಥ್, ಸುರೇಶ್ ಗೌಡ, ಜೈಪಾಲ್ ಮುಂತಾದವರು ಇದ್ದರು.

15 ದಿನಗಳಲ್ಲಿ ರಸ್ತೆಗಳ ಡಾಂಬರೀಕರಣ

ಸುಬ್ರಹ್ಮಣ್ಯ ನಗರದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಇನ್ನು 15 ದಿನಗಳಲ್ಲಿ ಬಡಾವಣೆಯ ಎಲ್ಲ ರಸ್ತೆಗಳನ್ನೂ ಡಾಂಬರೀಕರಣ ಮಾಡಲಾಗುವುದು. ಜತೆಗೆ ಒಂದು ತಿಂಗಳಲ್ಲಿ ಬಡಾವಣೆಯಲ್ಲಿ ನಮ್ಮ ಕ್ಲಿನಿಕ್, ಡಿಜಿಟಲ್ ಕ್ಲಿನಿಕ್ ಮತ್ತು ವರ್ಚುಯಲ್ ಕ್ಲಿನಿಕ್ ಉದ್ಘಾಟಿಸಲಾಗುವುದು ಎಂದರು.

ಕೇರಳದಲ್ಲಿ ವಿಶೇಷ ಪೂಜೆ

ಸಚಿವರ ಹುಟ್ಟುಹಬ್ಬದ ಪ್ರಯುಕ್ತ ಕೇರಳದ ತಿರುವನಂತಪುರದ ಅನಂತ ಪದ್ಮನಾಭ ಮತ್ತು ಗುರುವಾಯೂರಿನ ಕೃಷ್ಣ ದೇಗುಲ ಸೇರಿದಂತೆ ಅಲ್ಲಿನ 60 ದೇವಾಲಯಗಳಲ್ಲಿ ಚಲನಚಿತ್ರ ನಿರ್ದೇಶಕ ವಿಜೀಶ್ ಅವರು ವಿಶೇಷ ಪೂಜೆ ಮಾಡಿಸಿದ್ದಾರೆ.

Exit mobile version