ಆನೇಕಲ್: ಬೆಂಗಳೂರು ಸುತ್ತಮುತ್ತ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಕೃಷಿಯಿಂದ ಜನ ದೂರವಾಗುತ್ತಿದ್ದಾರೆ. ನಾವು ಸ್ವಾವಲಂಬಿ ಬದುಕು ಸಾಧಿಸಬೇಕಾದರೆ ಉತ್ತಮ ಗಾಳಿ, ನೀರು, ಅಗ್ನಿ ಮುಖ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade) ವಿಷಾದ ವ್ಯಕ್ತಪಡಿಸಿದರು.
ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಆನೇಕಲ್ ತಾಲೂಕಿನ ಬ್ಯಾಗಡದೆನಹಳ್ಳಿ ಗ್ರಾಮ ಪಂಚಾಯಿತಿಯ ಕೂನ ಮಡಿವಾಳದಲ್ಲಿ ಅಭಿವೃದ್ಧಿ ಮಾಡಲಾಗಿದ್ದ, 244ನೇ ಕೆರೆ ಹಸ್ತಾಂತರ ಹಾಗೂ ಬಾಗಿನ ಅರ್ಪಣೆ ಮತ್ತು ಫಲಾನುಭವಿಗಳಿಗೆ ಯೋಜನೆಯ ವಿವಿಧ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಲ ಇಲ್ಲದೆ ಯಾರೊಬ್ಬರೂ ಕೂಡ ಬದುಕಲು ಸಾಧ್ಯವಿಲ್ಲ. ಅಗ್ನಿ ವಾಯು ನಮಗೆ ಬದುಕಲು ಅತಿ ಮುಖ್ಯವಾದದ್ದು ಎನ್ನುವುದನ್ನು ನಾವು ಮರೆಯುತ್ತಿದ್ದೇವೆ. 2022ರಲ್ಲಿ ಆದ ಅತಿವೃಷ್ಟಿಯನ್ನು ನಾವೆಲ್ಲರೂ ನಮ್ಮ ಕಣ್ಣೆದುರೇ ನೋಡಿದ್ದೇವೆ. ಕೆರೆಕುಂಟೆಗಳು ಕಾಲುವೆಗಳು ಚೆನ್ನಾಗಿದ್ದರೆ ನೀರು ಎಲ್ಲಿ ಹಾದು ಹೋಗಬೇಕು, ಆ ಜಾಗದಲ್ಲಿ ಹೋಗುತ್ತದೆ ಈ ನಿಟ್ಟಿನಲ್ಲಿ ನಾವು ಕೆರೆಕುಂಟೆಗಳ ಉಳಿವಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದಕ್ಕೆ ಗ್ರಾಮಸ್ಥರ ಸಹಕಾರ ಹಾಗೂ ಎಲ್ಲರ ಬೆಂಬಲ ಮುಖ್ಯ ಎಂದರು.
ನಾವು ಪರಾವಲಂಬಿಗಳಾಗಿದ್ದೇವೆ, ನಮ್ಮ ಊರು ಬೆಳೆಯಬೇಕಾದರೆ ನಾವು ಕೂಡ ಇದರಲ್ಲಿ ಮುಖ್ಯವಾಗಿ ಸಹಕಾರ ಮಾಡಬೇಕು ಎನ್ನುವ ಆಸೆ ಇರಬೇಕು. ಊರು ಬೆಳವಣಿಗೆಯಾದರೆ ನಾಡು ಬೆಳವಣಿಗೆ ಆಗುತ್ತದೆ ಎನ್ನುವ ಅರಿವು ನಮಗಿರಬೇಕು. ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸ್ವ-ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಜತೆಗೆ ಎಲ್ಲ ವಿಭಾಗದಲ್ಲಿಯೂ ಕೂಡ ಬೆಳೆಯಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ನಾವು ಶಿಸ್ತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದರು.
ಮಧ್ಯವರ್ಜನ ಶಿಬಿರ
ಒಂದು ಮನೆಯಲ್ಲಿ ಒಬ್ಬ ವ್ಯಕ್ತಿಗೆ ದುಶ್ಚಟ ಇದ್ದರೆ ಮನೆ ಸೋರಿ ಹಾಳಾಗುತ್ತದೆ. ಇದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮದ್ಯವರ್ಜನ ಶಿಬಿರವನ್ನು ಹಮ್ಮಿಕೊಂಡಿದ್ದು, ನಮ್ಮ ಕಾರ್ಯಕ್ರಮದಿಂದಾಗಿ 112 ಕೋಟಿಗೂ ಹೆಚ್ಚು ಉಳಿತಾಯ ಆಗಿದೆ. ಬದಲಾವಣೆ ಎನ್ನುವುದನ್ನು ಮಾಡಬೇಕಾದರೆ ಎಲ್ಲರೂ ಕೈಜೋಡಿಸಬೇಕು ಎನ್ನುವ ನಿಟ್ಟಿನಲ್ಲಿ ಶೌರ್ಯ ಎನ್ನುವ ತಂಡವನ್ನು ನಾವು ಸಿದ್ಧ ಮಾಡುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಆ ತಂಡ ಸಹಾಯ ಮಾಡಲಿದೆ. ಆನೇಕಲ್ ತಾಲೂಕಿನಲ್ಲಿಯೂ ಕೂಡ ಈ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 18,000 ಕೋಟಿ ಸಾಲವನ್ನು ವಿವಿಧ ರೀತಿಯಲ್ಲಿ ನೀಡುವ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರೂ ಕೂಡ ನೆಮ್ಮದಿಯ ಜೀವನವನ್ನು ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮಹಿಳೆ ತನ್ನ ಮನೆಯನ್ನು ಸ್ವರ್ಗದಂತೆ ನೋಡಿಕೊಂಡಾಗ ಆ ಮನೆ ಬಂಗಾರ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ನಾವು ಇಡೀ ರಾಜ್ಯದಾದ್ಯಂತ ಸ್ವಸಹಾಯ ಸಂಘಗಳನ್ನು ತೆರೆದು ಲಕ್ಷಾಂತರ ಜನ ಉತ್ತಮ ಬದುಕನ್ನು ಕಂಡುಕೊಳ್ಳುತ್ತಿರುವುದು ನಮಗೆ ಸಂತಸದ ಸಂಗತಿ ಎಂದರು.
ಇದನ್ನೂ ಓದಿ | Star fashion | ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರ ಮನಗೆದ್ದ ನಟಿ ಶ್ರುತಿ ಹಾಸನ್ ಇಂಡೋ – ವೆಸ್ಟರ್ನ್ ಸೀರೆ ಸ್ವಾಗ್