ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ 2022ನೇ ಸಾಲಿನ ʻಡಾ.ಎಚ್.ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿʼಗೆ ಸಾಹಿತಿ ರಮೇಶ್ ಮುದಿಗೆರೆ ಅವರು ಆಯ್ಕೆಯಾಗಿದ್ದು, ಶನಿವಾರ(ಜುಲೈ 16) ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಸಾಹಿತಿ ರಮೇಶ್ ಮುದಿಗೆರೆ ಅವರ ʻಬಟಾಬಯಲುʼ ಕವನ ಸಂಕಲನ ಕೃತಿ, ಡಾ.ಎಚ್.ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿಗೆ(ದೃಷ್ಟಿದೋಷ ಇರುವ ಲೇಖಕರಿಗೆ ಮೀಸಲು) ಆಯ್ಕೆಯಾಗಿದ್ದು, ಪ್ರಶಸ್ತಿಯು 10,000 ರೂ. ನಗದು ಹಾಗೂ ಫಲಕ ಒಳಗೊಂಡಿದೆ.
ಅಖಿಲ ಕರ್ನಾಟಕ ಮಕ್ಕಳ ಕೂಟ ಸಂಯುಕ್ತಾಶ್ರಯದಲ್ಲಿ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ಕುವೆಂಪು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟದ ಅಧ್ಯಕ್ಷರಾದ ಕೆ. ಮೋಹನ್‌ದೇವ್ ಆಳ್ವ, ರಮಣ ಮಹ ಋಷಿ ಅಂಧರ ಅಕಾಡೆಮಿ ಸಂಸ್ಥಾಪಕರಾದ ಟಿ.ವಿ. ಶ್ರೀನಿವಾಸನ್, ದತ್ತಿ ದಾನಿಗಳಾದ ಎಚ್.ವಿಶ್ವನಾಥ್, ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಭಾಗವಹಿಸಲಿದ್ದಾರೆ.
ಇದನ್ನೂ ಓದಿ | SHE Q Award | ಗಲ್ಫ್ ಮಾಧ್ಯಮಂ ಶಿ-ಕ್ಯೂ ಎಕ್ಸಲೆನ್ಸ್ ಪ್ರಶಸ್ತಿಗೆ ಕನ್ನಡತಿ ಸುಮಾ ಮಹೇಶ್ ಗೌಡ ಭಾಜನ
ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಮೇಶ್ ಮುಡಿಗೆರೆ ಪರಿಚಯ
ದೃಷ್ಟಿ ವಿಕಲ ಚೇತನ ಸಾಹಿತಿ ಮುದಿಗೆರೆ ರಮೇಶ್ ಅವರು 1972ರ ಮಾರ್ಚ್ 4ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಪದವೀಧರರಾಗಿದ್ದು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಆರು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಸೂರ್ಯನ ರಾತ್ರಿಗಳು, ಎದೆಯ ಪುಟಗಳು, ಬಟಾ ಬಯಲು(ಸ್ವತಂತ್ರ ಕೃತಿಗಳು) ಪ್ರಕಟವಾಗಿವೆ. 2019ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, 2018ರಲ್ಲಿ ಮೈಸೂರಿನಲ್ಲಿ ನಡೆದ ದಸರಾ ಕವಿಗೋಷ್ಠಿ, ಬಾನುಲಿ ಹಾಗೂ ದೂರದರ್ಶನದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಪತ್ರಿಕೋದ್ಯಮದಲ್ಲಿ ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆಯ ‘ಚುಕ್ಕಿ ಚೈತ್ರ’ದ ಸಂಪಾದಕರಾಗಿ, ‘ಭುಗಿಲು’ ಎಂಬ ತುಮಕೂರಿನ ಸ್ಥಳೀಯ ವಾರಪತ್ರಿಕೆಯ ಅಂಕಣಕಾರರಾಗಿ, ಕರ್ನಾಟಕ ಅಂಧರ ವಿಮೋಚನ ವೇದಿಕೆಯ ‘ಅಂತರಾಕ್ಷಿ’ ಎಂಬ ರಾಜ್ಯದ ಅಂಗವಿಕಲರ ಏಕೈಕ ಪ್ರಾತಿನಿಧಿಕ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ದೂರದರ್ಶನ ಚಂದನ, ಸುವರ್ಣ, ಸುದ್ದಿ ಟಿ.ವಿ., ಆಕಾಶವಾಣಿಗಳಲ್ಲಿ ಸಂದರ್ಶಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ | ಜಯದೇವ ಶ್ರೀ ಪ್ರಶಸ್ತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆ