ಆನೇಕಲ್ (ಬೆಂಗಳೂರು): ಇಸ್ರೋ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್ (Dr K Kasturirangan) ಅವರನ್ನು ಬೊಮ್ಮಸಂದ್ರ ಬಳಿಯ ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿದೆ. ಸೋಮವಾರ ಸಂಜೆ ಹೃದಯಾಘಾತವಾದ (Heart attack) ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಶ್ರೀಲಂಕಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಯಿತು. ಎಚ್‌ಎಎಲ್ ವಿಮಾನ ನಿಲ್ದಾಣದಿಂದ ನಗರದ ಬೊಮ್ಮಸಂದ್ರ ಬಳಿಯ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕಸ್ತೂರಿ ರಂಗನ್ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಖ್ಯಾತ ಹೃದ್ರೋಗ ತಜ್ಞ ದೇವಿ ಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ರಾತ್ರಿ 8 ಗಂಟೆಯ ಸುಮಾರಿಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಸ್ತೂರಿ ರಂಗನ್ ಅವರನ್ನು ಜೀರೋ ಟ್ರಾಫಿಕ್ ಮೂಲಕ ನಾರಾಯಣ ಹೆಲ್ತ್ ಸಿಟಿಗೆ ರವಾನೆ ಮಾಡಲಾಯಿತು. ಸದ್ಯ ಎಮರ್ಜೆನ್ಸಿ ಕೇರ್ ಯೂನಿಟ್‌ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಖ್ಯಾತ ಹೃದ್ರೋಗ ತಜ್ಞ ದೇವಿ ಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯಕೀಯ ತಪಾಸಣೆ ಬಳಿಕ ಪ್ರಾಥಮಿಕವಾಗಿ ವೈದ್ಯರು ರಕ್ತ ಪರೀಕ್ಷೆ, ಇಸಿಜಿ ಪರೀಕ್ಷೆ ನಡೆಸುತ್ತಿದ್ದಾರೆ. ಹೃದಯ ಸಂಬಂಧಿತ ಸಮಸ್ಯೆ ಬಗ್ಗೆ ತಿಳಿಯಲು ಇಸಿಜಿ, ಎಕೋ, ಕರೋನರಿ ಆ್ಯಂಜಿಯೋಗ್ರಾಮ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ | Dr K Kasturirangan : ಖ್ಯಾತ ವಿಜ್ಞಾನಿ ಕಸ್ತೂರಿರಂಗನ್‌ಗೆ ಹೃದಯಾಘಾತ; ಲಂಕಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್
82 ವರ್ಷದ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು ಅಧ್ಯಯನ ಸಂಬಂಧ ಶ್ರೀಲಂಕಾ ಪ್ರವಾಸದಲ್ಲಿದ್ದರು. ಅಲ್ಲಿ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿದೆ. ಕಸ್ತೂರಿರಂಗನ್ ಅವರು ಪಶ್ಚಿಮ ಘಟ್ಟ ಅಧ್ಯಯನ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಕ ಸಮಿತಿ ಅಧ್ಯಕ್ಷರಾಗಿ ವರದಿ ಸಲ್ಲಿಸಿ ಗಮನ ಸೆಳೆದಿದ್ದಾರೆ.