ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಂಡುಬರುತ್ತಿದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ರಾಜಧಾನಿಯಲ್ಲಿ ಮೆಟ್ರೋ ಮಾರ್ಗಗಳನ್ನೂ ಸರ್ಕಾರ ವಿಸ್ತರಣೆ ಮಾಡುತ್ತಿದೆ. ಇನ್ನು ಶೀಘ್ರದಲ್ಲೇ ಚಾಲಕ ರಹಿತ ಮೆಟ್ರೋ ರೈಲುಗಳು ಕೂಡ ಕಾರ್ಯಾಚರಣೆ ನಡೆಸಲಿವೆ. ಇದೀಗ ನಮ್ಮ ಮೆಟ್ರೋದಲ್ಲಿ ಮೊದಲ ಚಾಲಕ ರಹಿತ ರೈಲನ್ನು (driverless metro) ಹೆಬ್ಬಗೋಡಿ ಡಿಪೋದಲ್ಲಿ ಅನಾವರಣಗೊಳಿಸಲಾಗಿದ್ದು, ಡ್ರೈವಿಂಗ್ ಕೋಚ್‌ನ ಚಿತ್ರವನ್ನು ಬಿಎಂಆರ್‌ಸಿಎಲ್ ಹಂಚಿಕೊಂಡಿದೆ.
ನಮ್ಮ ಮೆಟ್ರೋದ ಚಾಲಕ ರಹಿತ ಮೆಟ್ರೋದ ಪ್ರಾಯೋಗಿಕ ಸಂಚಾರ ಮಾರ್ಚ್ 1ರಂದು ನಡೆಯುವ ಸಾಧ್ಯತೆಯಿದೆ ಎನ್ನಲಾಗಿದ್ದು, ಈ ರೈಲು ಹಳದಿ ಮಾರ್ಗವಾದ (Yellow lane) ರಾಷ್ಟ್ರೀಯ ವಿದ್ಯಾಲಯ ರೋಡ್ (ಆರ್.ವಿ ರಸ್ತೆ) – ಬೊಮ್ಮಸಂದ್ರ ಮಾರ್ಗ (RV Road-Bommasandra Road) ಸದ್ಯವೇ ಕಾರ್ಯಾರಂಭ ಮಾಡಲಿದ್ದು ಅದರಲ್ಲಿ ಚಾಲಕ ರಹಿತ ರೈಲು ಓಡಾಡಲಿದೆ.
ಆರು ಬೋಗಿಗಳ ಚಾಲಕ ರಹಿತ ಮೆಟ್ರೋ ರೈಲು ಜನವರಿ 24ರಂದು ಶಾಂಘೈ ಬಂದರಿನಿಂದ ಹೊರಟಿತ್ತು. ಫೆಬ್ರವರಿ 6ರಂದು ಚೆನ್ನೈ ಬಂದರು ತಲುಪಿ, ನಂತರ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿತ್ತು. ಈ ಚಾಲಕ ರಹಿತ ಮೆಟ್ರೋ ರೈಲನ್ನು ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ ಲಿಮಿಟೆಡ್ ತಯಾರು ಮಾಡಿದೆ. ಮೇಕ್ ಇನ್ ಇಂಡಿಯಾ ಉಪಕ್ರಮದ ಮಾನದಂಡಗಳನ್ನು ಪೂರ್ಣಗೊಳಿಸುವುದಕ್ಕೆ ಚೀನಾದ ಸಿಆರ್‌ಆರ್‌ಸಿ, ಕೋಲ್ಕೊತಾ ಮೂಲದ ತಿತಾಗಢ ರೈಲ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ಈ ಕಂಪನಿ ಬೋಗಿಗಳ ಉತ್ಪಾದನೆ ಮತ್ತು ಪೂರೈಕೆಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದವು. ಹೆಬ್ಬಗೋಡಿ ಡಿಪೋದಲ್ಲಿರುವ ತಲಾ 38.7 ಮೆಟ್ರಿಕ್ ಟನ್ ತೂಕದ 6 ಬೋಗಿಗಳ ರೈಲು ಆರ್‌ವಿ ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲಿದೆ.
First Photos of the unwrapped prototype Train ( Driving Motor Coach) at the unloading area of Hebbagodi depot today . FKI pic.twitter.com/PFd3IJV49y
— ನಮ್ಮ ಮೆಟ್ರೋ (@OfficialBMRCL) February 20, 2024
ಇದನ್ನೂ ಓದಿ | Lok Sabha Election: ಮಾರ್ಚ್ 13ರ ಬಳಿಕ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ
ಇನ್ನು ಹಳದಿ ಮಾರ್ಗದ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಪ್ರಯಾಣಿಕರು ಈ ಮೆಟ್ರೋವನ್ನು ಬಳಸುವುದರಿಂದ ಜಯದೇವ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಸಿಲ್ಕ್ ಬೋರ್ಡ್ ಜಂಕ್ಷನ್ ನಗರದ ಅತ್ಯಂತ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿದೆ. ಈ ಮಾರ್ಗವನ್ನು ಸೇರಿಸುವುದರಿಂದ ಕಡಿಮೆ ದಟ್ಟಣೆಯನ್ನು ಅನುಭವಿಸುವ ಸಾಧ್ಯತೆಯಿದೆ. ಈ ಮೆಟ್ರೋ ಮಾರ್ಗ 2024ರ ಮಧ್ಯಭಾಗದಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ತಿಳಿದುಬಂದಿದೆ.