Site icon Vistara News

Kalaburagi News: ಮುಂದಿನ ವಾರ ರಾಜ್ಯಕ್ಕೆ ಬರ ಅಧ್ಯಯನ ತಂಡ : ಕೃಷಿ ಸಚಿವ ಚೆಲುವರಾಯಸ್ವಾಮಿ

Agriculture Minister N Cheluvarayaswamy latest pressmeet at Kalaburagi

ಕಲಬುರಗಿ: ರಾಜ್ಯದಲ್ಲಿ ಬರಗಾಲ (Drought) ಪರಿಸ್ಥಿತಿ ಅಧ್ಯಯನಗೈಯಲು ಕೇಂದ್ರದಿಂದ ಮೂರು ತಂಡಗಳು (3 Teams) ಮುಂದಿನ ವಾರದಲ್ಲಿ ರಾಜ್ಯಕ್ಕೆ ಆಗಮಿಸುತ್ತಿವೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವಿಭಾಗೀಯ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 161 ತೀವ್ರ ಮತ್ತು 34 ಸಾಧಾರಣ ಹೀಗೆ ಒಟ್ಟು 195 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ ಹಿನ್ನಲೆಯಲ್ಲಿ ಬರಗಾಲ ಪರಿಸ್ಥಿತಿ ಅರಿಯಲು ಕೇಂದ್ರ ಸರ್ಕಾರವು ಬರ ಅಧ್ಯಯನ ತಂಡಗಳನ್ನು ಕಳುಹಿಸುವುದಾಗಿ ಮಾಹಿತಿ ನೀಡಿದೆ. ಇದೇ ಅಕ್ಟೋಬರ್ 10 ರೊಳಗೆ ತಂಡಗಳು ಆಗಮಿಸಲಿವೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ

ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿ ಪರಿಸ್ಥಿತಿಯಿದೆ. ಹೆಚ್ಚಿನ ಪ್ರಮಾಣದಲ್ಲಿ ಬರಗಾಲವಿದೆ. ಬೆಳೆ ಹಾನಿ ಸಮೀಕ್ಷೆ ನಡೆದಿದ್ದು, ಈಗಾಗಲೇ ಶೇ. 95 ರಷ್ಟು ಬೆಳೆ ಹಾನಿ ಸಮೀಕ್ಷೆಯಾಗಿದೆ. ತಂಡಗಳು ಆಗಮಿಸುವ ಹೊತ್ತಿಗೆ ಸಮೀಕ್ಷೆ ಪೂರ್ಣಗೊಂಡು ವರದಿ ಅಂತಿಮಗೊಳ್ಳಲಿದೆ. ಪ್ರಾಥಮಿಕ ವರದಿ ಪ್ರಕಾರ ಈಗಾಗಲೇ 40 ಲಕ್ಷ ಹೆಕ್ಟೇರ್‌ ದಲ್ಲಿ ಸುಮಾರು 28 ಸಾವಿರ ಕೋ. ರೂ ಹಾನಿ ಅಂದಾಜಿಸಲಾಗಿದೆ. 4,000 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಣೆ ನೀಡಿದರು.

ನರೇಗಾ ಕೂಲಿ ಕಾರ್ಮಿಕರ ಕೆಲಸದ ದಿನ 100 ರಿಂದ 150 ಕ್ಕೆ ಹೆಚ್ಚಿಸಲಾಗುವುದು. ಬರಗಾಲ ಘೋಷಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತದೆ. ಪ್ರತಿ ವಾರ ಕಮಿಟಿ ಸಭೆ ಕರೆದು ಪರಿಹಾರ ಕಾರ್ಯ ಉಸ್ತುವಾರಿ ನೋಡಿಕೊಳ್ಳಲಿದೆ ಎಂದ ಅವರು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಪರಿಣಾಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದರು.

ಕಳೆದ ವರ್ಷ ಕಲಬುರಗಿ, ಬೀದರ್‌, ಯಾದಗಿರಿ, ವಿಜಯಪುರ ಜಿಲ್ಲೆಯಲ್ಲಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿದ್ದರಿಂದ ಹಿಂದಿನ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತಾದರು, ಅನುದಾನ ಬಿಡುಗಡೆ ಮಾಡಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಎರಡು ಹಂತದಲ್ಲಿ 4 ಜಿಲ್ಲೆಗಳ 2,37,860 ರೈತರಿಗೆ 148 ಕೋಟಿ ರೂ. ಪರಿಹಾರ ನೀಡಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯ 1,65,027 ರೈತರಿಗೆ 120.66 ಕೋಟಿ ರೂ. ಪರಿಹಾರ ಸೇರಿದೆ. ಇನ್ನು ಬಾಕಿ 74 ಕೋಟಿ ರೂ. ಪರಿಹಾರ ನೀಡಬೇಕಿದ್ದು, ಅದನ್ನು ಶೀಘ್ರ ರೈತರ ಖಾತೆಗೆ ಪಾವತಿಸಲಾಗುವುದು ಎಂದರು.

ಇದನ್ನೂ ಓದಿ: Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ

ನವೋದ್ಯಮ ಯೋಜನೆಯಡಿ ಹೊಸ ಎಫ್.ಪಿ.ಓಗಳಿಗೆ 5-20 ಲಕ್ಷ ರೂಪಾಯಿ ವರೆಗಿದ್ದ ಸಾಲದ ನೆರವನ್ನು 20-50 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದು, ಇದಕ್ಕಾಗಿ 10 ಕೋಟಿ ಮೀಸಲಿಡಲಾಗಿದೆ. ಬೃಹತ್ ಕಟಾವ್ ಹಬ್ (ಹಾರ್ವೆಸ್ಟರ್ ಹಬ್) ಸ್ಥಾಪನೆಗೆ 50 ಕೋಟಿ ರೂ. ಮೀಸಲಿಟ್ಟಿದ್ದು, ರಾಜ್ಯದಾದ್ಯಂತ 100 ಹಬ್ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.

ಬೆಳೆ ವಿಮೆ ಮಾರ್ಪಾಡು

ಬೆಳೆ ವಿಮೆಯನ್ನು ಈಗ ಖಾಸಗಿ ಕಂಪನಿಯೇ ಉಸ್ತುವಾರಿಯಾಗಿದ್ದು, ಸಮರ್ಪಕವಾಗಿ ಬೆಳೆ ಹಾನಿಗೆ ತಕ್ಕ ಪರಿಹಾರ ದೊರಕುತ್ತಿಲ್ಲ ಎಂಬುದಾಗಿ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಈ ಮೊದಲಿನಂತೆ ಮುಂದಿನ ವರ್ಷದಿಂದ ಸರ್ಕಾರದಿಂದಲೇ ಬೆಳೆ ವಿಮೆ ನಿರ್ವಹಿಸಲು ಚಿಂತನೆ ನಡೆದಿದೆ ಎಂದ ಸಚಿವರು, ಕೃಷಿ ಹೊಂಡ ನಿರ್ಮಾಣ ಮಾಡುವ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಈ ವರ್ಷ 100 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

Exit mobile version