ಕೊಡಗು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು (Drowned in river) ನೀರುಪಾಲಾಗಿದ್ದಾರೆ. ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದ ಬರಪೊಳೆಯಲ್ಲಿ ಘಟನೆ ನಡೆದಿದೆ. ರಷಿಕ್ ಕುಶಾಲಪ್ಪ(20), ಆಕಾಶ್ ಬಿದ್ದಪ್ಪ(20), ಸುದೀಶ್ ಅಯ್ಯಪ್ಪ(20) ಮೃತ ವಿದ್ಯಾರ್ಥಿಗಳಾಗಿದ್ದಾರೆ.
ಈ ಮೂವರು ಕೊಡಗಿನ ಪೊನ್ನಂಪೇಟೆ ಸಿಇಟಿ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದರು. ವೀಕೆಂಡ್ ಕಾರಣಕ್ಕೆ ಐವರು ಸ್ನೇಹಿತರು ಪೊನ್ನಂಪೇಟೆ ಸಮೀಪದ ಕೊಂಗಣ ನದಿ ಬಳಿ ತೆರಳಿದ್ದಾರೆ. ಒಬ್ಬೊಬ್ಬರಾಗಿ ನೀರಿಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಈಜಲು ಆಗದೆ ನೀರಲ್ಲಿ ಈ ಮೂವರು ಕೊಚ್ಚಿ ಹೋಗಿದ್ದಾರೆ. ಮೂವರು ಪ್ರಾಣ ಕಳೆದುಕೊಂಡರೆ, ಇಬ್ಬರು ಪ್ರಾಣಾಪಾಯದಿಂದ ದಡವನ್ನು ಸೇರಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊನ್ನಂಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಕೊಚ್ಚಿ ಹೋಗಿದ್ದ ಮೃತದೇಹಗಳನ್ನು ಮೇಲಕ್ಕೆತ್ತಿದ್ದು ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪಲು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: New Year 2024 : ಹೊಸ ವರ್ಷದ ಪಾರ್ಟಿಗೆ ರೈಲಿನಲ್ಲಿ ಬಂತು ಗಾಂಜಾ!
ಉಳ್ಳಾಲ ಸಮುದ್ರದಲ್ಲಿ ಈಜಲು ಹೋದ ಇಬ್ಬರು ನೀರುಪಾಲು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangalore News) ಹೊರವಲಯದ ಉಳ್ಳಾಲ ಬಳಿ ಸಮುದ್ರದಲ್ಲಿ (Sea at Ullal in Mangalore) ಈಜಲು ತೆರಳಿದ ಇಬ್ಬರು ನೀರುಪಾಲಾಗಿದ್ದರು. (Drowned in Sea). ಸಮುದ್ರ ಪಾಲಾದವರಲ್ಲಿ ಒಬ್ಬನ ಶವ ಪತ್ತೆಯಾಗಿದ್ದರೆ ಇನ್ನೊಬ್ಬ ಇನ್ನೂ ನಾಪತ್ತೆಯಾಗಿದ್ದ. ಒಬ್ಬನನ್ನು ರಕ್ಷಿಸಲಾಗಿದೆ.
ಚಿಕ್ಕಮಗಳೂರು ಮೂಲದ ಮೂವರು ಯುವಕರಾದ ಬಶೀರ್ (23), ಸಲ್ಮಾನ್ (19), ಸೈಫ್ ಆಲಿ (27) ಅವರು ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿದ್ದರು. ಹಾಗೆ ಬಂದವರು ದರ್ಶನ, ಪ್ರಾರ್ಥನೆ ಮುಗಿಸಿ ಸಮೀಪದಲ್ಲೇ ಇರುವ ಸಮುದ್ರದ ಬಳಿ ಬಂದಿದ್ದರು.
ಅಲ್ಲಿ ಸಮುದ್ರದಲ್ಲಿ ಈಜಲು ಇಳಿದಾಗ ಮೂವರೂ ನೀರು ಪಾಲಾದರು. ಕೂಡಲೇ ಅಲ್ಲಿದ್ದ ಜೀವರಕ್ಷಕ ತಂಡ ಸಮುದ್ರಕ್ಕೆ ಜಿಗಿದು ಸೈಫ್ ಅಲಿಯನ್ನು ಮೇಲೆತ್ತಿ ಹಾಕಿತು. ಸಲ್ಮಾನ್‌ನನ್ನು ಕೂಡಾ ಮೇಲೆತ್ತಿತು. ಆದರೆ, ಉಳ್ಳಾಲ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದ. ಸಮುದ್ರ ಪಾಲಾದ ಬಶೀರ್ ಇನ್ನೂ ನಾಪತ್ತೆಯಾಗಿದ್ದು, ಶವ ಸಿಕ್ಕಿಲ್ಲ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರವಾರ ಬಳಿ ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಾಳಿ ನದಿ ಸೇತುವೆಯ ಮೇಲೆ ರಾಷ್ಟ್ರೀಯ ಹೆದ್ದಾರಿ 66ರಿಂದ ಕಾಳಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ನದಿಗೆ ಹಾರಿದ್ದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸರು, ಕರಾವಳಿ ಕಾವಲುಪಡೆ ಸಿಬ್ಬಂದಿ ಭೇಟಿ ನೀಡಿ ಬೋಟ್ ಮೂಲಕ ನಾಪತ್ತೆಯಾದ ಯುವಕನಿಗಾಗಿ ಶೋಧ ನಡೆಸಿದ್ದರು. ಆದರೆ, ಗುರುವಾರ ಸಂಜೆಯವರೆಗೂ ಶವ ಸಿಕ್ಕಿರಲಿಲ್ಲ.
ಶುಕ್ರವಾರ ಶವ ಕಾರವಾರದ ಅಳ್ವೇವಾಡದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಕಾರವಾರದ ಆದಿತ್ಯ ನಾಯ್ಕ(32) ಎಂದು ಗುರುತಿಸಲಾಗಿದೆ. ಆತ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.
ಚುಂಚಿ ಫಾಲ್ಸ್‌ನಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
ರಾಮನಗರ: ಕನಕಪುರ ತಾಲೂಕಿನ ಚುಂಚಿ ಫಾಲ್ಸ್‌ನಲ್ಲಿ ಈಜಲು ಹೋಗಿ ಎಂಜಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿದ್ದಾನೆ. ವರುಣ್ (19) ಮೃತಪಟ್ಟ ದುರ್ದೈವಿ. ದೊಡ್ಡಬಳ್ಳಾಪುರದ ದೇವನಹಳ್ಳಿ ತಾಲೂಕಿನಿಂದ ಪ್ರವಾಸಕ್ಕೆಂದು ವರುಣ್ ಸ್ನೇಹಿತರೊಂದಿಗೆ (Youth Drowned) ಬಂದಿದ್ದ.
ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಸ್ನೇಹಿತರೊಂದಿಗೆ ಈಜಲು ನೀರಿಗೆ ಇಳಿದಾಗ ಮುಳುಗಿ ಹೋಗಿದ್ದಾರೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ದಳ ಹಾಗೂ ಸಾತನೂರು ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಶೋಧ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ