ಬೆಂಗಳೂರು: ಅವನು ಕೇರಳದ ಡ್ರಗ್ ಪೆಡ್ಲರ್. ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ. ಕೇರಳದ ಕಿತಾಪತಿಗೆ ಸಂಬಂಧಿಸಿ ಅವನನ್ನು ಬಂಧಿಸಲು ಕೇರಳದ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬಂದಿದ್ದರು. ಡ್ರಗ್ ಪೆಡ್ಲರ್ ಒಂದು ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದಾನೆ ಎಂಬ ಮಾಹಿತಿ ಪಡೆದ ಅವರು ಆ ಹೋಟೆಲ್‌ಗೆ ಬಂದು ʻಅರೆಸ್ಟ್ʼ ಅಂದಿದ್ದಾರೆ. ಆದರೆ ಆ ಚಾಲಾಕಿ ಪೆಡ್ಲರ್ ಎಸ್‌ಐಯನ್ನೇ ರಿವಾಲ್ವರ್ ಹಿಡಿದು ಬೆದರಿಸಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆಗ ಕೇರಳದ ಎಸ್‌ಐ ಕರ್ನಾಟಕ ಪೊಲೀಸರ ನೆರವು ಕೋರಿದ್ದಾರೆ. ಕೇರಳದ ಪೊಲೀಸ್‌ಗೆ ಮಾಡಿದ ಅಪಮಾನ, ಹಾಕಿದ ಬೆದರಿಕೆ ಎಂದೇ ಪರಿಭಾವಿಸಿಕೊಂಡ ಕರ್ನಾಟಕ ಪೊಲೀಸರು ಡ್ರಗ್ ಪೆಡ್ಲರ್‌ನನ್ನು ಕೆಲವೇ ದಿನದಲ್ಲಿ ಹೆಡೆಮುರಿಗೆ ಕಟ್ಟಿದ್ದಾರೆ. ಇದು ಕರ್ನಾಟಕ ಪೊಲೀಸ್ ಎಂದು ತೋರಿಸಿಕೊಟ್ಟಿದ್ದಾರೆ.
ಡ್ರಗ್ ಪೆಡ್ಲರ್‌ನ ಹೆಸರು ಜಾಫರ್. ಕೇರಳದಲ್ಲಿ ಕುಖ್ಯಾತನಾಗಿರುವ ಆತನ ಚಟುವಟಿಕೆ ಬೆಂಗಳೂರಿಗೂ ವಿಸ್ತರಿಸಿತ್ತು. ಅವನು ಕ್ಯಾಲಿಕಟ್ ಪೊಲೀಸರಿಗೆ ಡ್ರಗ್ಸ್ ಕೇಸಲ್ಲಿ ಬೇಕಾಗಿದ್ದ. ಹೀಗಾಗಿ ಆತನನ್ನು ಬಂಧಿಸಲೆಂದು ಬಂದ ಕೇರಳದ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಒಂದು ಟೀಮ್ ಬಂದಿತ್ತು. ಜಾಫರ್ ಎಚ್ ಎಸ್ ಆರ್ ಲೇಔಟ್‌ನಲ್ಲಿರುವ ಆಲ್ ಬೇಕ್ ಹೋಟೆಲ್‌ಗೆ ಊಟಕ್ಕೆ ಬರುತ್ತಾನೆ ಎಂಬ ಮಾಹಿತಿ ಸಿಕ್ಕಿದೆ. ಟೀಮ್ ಅಲ್ಲಿಗೆ ಹೋದರೆ ಜಾಫರ್ ಎಸ್‌ಐಗೇ ರಿವಾಲ್ವರ್ ಹಿಡಿದು ಬೆದರಿಸಿದ್ದಾನೆ. ಉಳಿದವರೂ ಹತ್ತಿರ ಬಾರದಂತೆ ಆವಾಜ್ ಹಾಕಿದ್ದಾನೆ. ಮತ್ತು ಕಾರಿನಲ್ಲಿ ಪರಾರಿಯಾಗಿದ್ದಾನೆ.
ಈ ಸಂಬಂಧ ಕೇರಳ ಸಬ್ ಇನ್ಸ್ ಪೆಕ್ಟರ್ ಅವರು ಎಚ್ ಎಸ್ ಆರ್ ಲೇಔಟ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ನಡುವೆ ಬೆಂಗಳೂರು ಪೊಲೀಸರು ಕ್ಯಾಲಿಕಟ್ ಪೊಲೀಸರಿಗೆ ಬೆಂಬಲಕ್ಕೆ ನಿಂತು ಬಂಧಿಸಿದ್ದಾರೆ. ಈಗ ಆತನನ್ನು ಕೇರಳಕ್ಕೆ ಕರೆದೊಯ್ಯಲಾಗುತ್ತಿದೆ. ಈ ನಡುವೆ ಒಬ್ಬ ಡ್ರಗ್ ಪೆಡ್ಲರ್ ಕೈಗೆ ರಿವಾಲ್ವರ್ ಎಲ್ಲಿಂದ ಬಂತು ಬಂತು ಅನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.