ಕಾರವಾರ: ಜಿಲ್ಲೆಯ (Karwar News) ವಿವಿಧ ಠಾಣೆಗಳಲ್ಲಿ ಒಟ್ಟು 51 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 11 ಲಕ್ಷ ರೂ. ಮೌಲ್ಯದ 47 ಕೆಜಿಯಷ್ಟು ಮಾದಕ ದ್ರವ್ಯಗಳನ್ನು ನ್ಯಾಯಾಲಯದ ಅನುಮತಿಯ ಮೇರೆಗೆ ನಾಶಪಡಿಸಲಾಯಿತು. ಅಂಕೋಲಾ ತಾಲೂಕಿನ ಬೊಗ್ರಿಬೈಲ್‌ನ ಕೆನರಾ ಐ.ಎಮ್.ಎ.(ಯು.ಕೆ) ಕಾನ್ ಗ್ರೀಟ್‌ಮೆಂಟ್ ಫೆಸಿಲಿಟಿಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಸಮ್ಮುಖದಲ್ಲಿ ಮಾದಕ ವಸ್ತುಗಳನ್ನು (Drugs Destroyed) ನಾಶಪಡಿಸಲಾಯಿತು.
ಮಾದಕ ವಸ್ತುಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆಯು ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದ್ದು, ಇದೇ ರೀತಿ ಮುಂದಿನ ದಿನಗಳಲ್ಲೂ ಮಾದಕ ವಸ್ತುಗಳ ಸಾಗಾಟ ಪ್ರಕರಣಗಳ ವಿರುದ್ಧ ಎಚ್ಚರಿಕೆ ವಹಿಸಲಾಗುವುದು. ಇನ್ನೂ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವ ಮೂಲಕ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಸೇವನೆಯನ್ನು ಸಂಪೂರ್ಣ ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸನ್ನದ್ಧವಾಗಿದೆ. ಮಾದಕ ವಸ್ತುಗಳನ್ನು ಪೂರೈಸುವವರ ವಿರುದ್ಧ ತೀವ್ರ ನಿಗಾ ಇರಿಸಲಾಗಿದ್ದು ಇನ್ನಷ್ಟು ಪ್ರಕರಣಗಳನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Sanskrit Yuvajanotsavah: ಮಾ. 26ರಂದು ಮಲ್ಲೇಶ್ವರದಲ್ಲಿ ‘ಸಂಸ್ಕೃತ ಯುವಜನೋತ್ಸವಃ’ ಕಾರ್ಯಾಗಾರ
ಒಂದು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 24 ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿದ್ದು, ಗಾಂಜಾ ಇರಿಸಿಕೊಂಡಿದ್ದಂತಹ ಹತ್ತರಿಂದ ಹನ್ನೆರಡು ಪ್ರಕರಣಗಳು ದಾಖಲಾಗಿದ್ದವು. ಈ ನಿಟ್ಟಿನಲ್ಲಿ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಪೊಲೀಸರ ತಂಡವನ್ನು ರೂಪಿಸಿಕೊಂಡ ಗಾಂಜಾ ಸಾಗಾಟ, ಸೇವನೆ ಮಾಡುವವರ ಮಾಹಿತಿ ಕಲೆ ಹಾಕಿ ಅಂತಹವರನ್ನು ಮಟ್ಟ ಹಾಕುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಾದಕ ವಸ್ತು ಸಾಗಾಟದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಎಸ್ಪಿ ವಿಷ್ಣುವರ್ಧನ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರವಾರ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ, ಭಟ್ಕಳ ಡಿವೈಎಸ್ಪಿ ಶ್ರೀಕಾಂತ, ಡಿಸಿಆರ್‌ಬಿ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಸಿಪಿಐ ಹಾಗೂ ಪಿಎಸೈ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ: Wall collapse: ತಡೆಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತ್ಯು