ಬೆಂಗಳೂರು: ಈಗಷ್ಟೇ 2021-22ನೇ ಶೈಕ್ಷಣಿಕ ಸಾಲು ಮುಕ್ತಾಯಗೊಂಡಿದ್ದು, 2023-24ನೇ ಶೈಕ್ಷಣಿಕ (Academic year) ಸಾಲಿಗೆ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ಮಧ್ಯೆ ಪೋಷಕರಿಗೆ ತಮ್ಮ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ವಯೋಮಿತಿ (Age Limit) ಅಡ್ಡಿ ಬರುತ್ತಿದ್ದು ಆತಂಕಕ್ಕೆ ಒಳಗಾಗಿದ್ದಾರೆ. ಪೋಷಕರ ಟೆನ್ಷನ್ ಫ್ರೀ ಮಾಡಲು ಖಾಸಗಿ ಶಾಲೆಗಳು (Private school) ಮಾಸ್ಟರ್ ಪ್ಲಾನ್ ಮಾಡಿದೆ.
ಅಂದಹಾಗೆ, ಈ ಹಿಂದೆ ಎಲ್‌ಕೆಜಿಗೆ ದಾಖಲಾತಿ ಹೊಂದಲು 3 ವರ್ಷ 5 ತಿಂಗಳು ಹಾಗೂ 1ನೇ ತರಗತಿಗೆ ಸೇರಿಸಲು 5 ವರ್ಷ, 5 ತಿಂಗಳು ಹಾಗೂ 5 ವರ್ಷ 10 ತಿಂಗಳು ವಯೋಮಿತಿ ಇತ್ತು. ಆದರೆ, ರಾಜ್ಯ ಸರ್ಕಾರವು ಈ ಆದೇಶವನ್ನು ಹಿಂಪಡೆದಿತ್ತು. ಆ ಬಳಿಕ ಎನ್‌ಇಪಿ ಅಡಿಯಲ್ಲಿ ಕೇಂದ್ರ ಸರ್ಕಾರವೂ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿಪಡಿಸಿತ್ತು. ಆ ಪ್ರಕಾರ ಶೈಕ್ಷಣಿಕ ವರ್ಷದ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಕಳೆದ 2022ರ ಜುಲೈನಲ್ಲಿ ಆದೇಶಿಸಿತ್ತು.
ಆರ್‌ಟಿಇ ಶಿಕ್ಷಣ ಕಾಯ್ದೆ (RTE Education Act), ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ಹೊಸ ವಯೋಮಿತಿಯನ್ನು ನಿಗದಿ ಮಾಡಿ ಸರ್ಕಾರ ಆದೇಶ (Order) ಹೊರಡಿಸಿತ್ತು. ಪ್ರಸಕ್ತ ಸಾಲಿನಿಂದ ಈ ಹೊಸ ನಿಯಮ ಜಾರಿಗೆ ಬರುತ್ತಿದ್ದು, ಇದುವೇ ಪೋಷಕರಿಗೆ ಕಗ್ಗಂಟಾಗಿ ಪರಿಣಮಿಸಿದೆ. 6 ವರ್ಷಕ್ಕೆ 1 ದಿನ ಕಡಿಮೆ ಇದ್ದರೂ ಮಕ್ಕಳಿಗೆ ಶಾಲೆಯಲ್ಲಿ ದಾಖಲಾತಿ ಸಿಗುವುದಿಲ್ಲ. ಇದರಿಂದಾಗಿ ಇಡೀ ಒಂದು ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.
ಖಾಸಗಿ ಶಾಲೆಗಳಿಂದ ಫಸ್ಟ್ ಲೆವೆಲ್ ಕ್ಲಾಸ್
ಈ ಹೊಸ ನಿಯಮ ಜಾರಿ ಬೆನ್ನಲ್ಲೇ ಇದೀಗ 6 ವರ್ಷದ ವಯೋಮಿತಿಯನ್ನು ಸರಿದೂಗಿಸಲು ಹೊಸ ಪ್ಲಾನ್‌ಗಳನ್ನು ಮಾಡಿಕೊಂಡಿವೆ. ಯುಕೆಜಿ ಬಳಿಕ ಫಸ್ಟ್ ಲೆವೆಲ್ ಕ್ಲಾಸ್ ಪರಿಚಯಕ್ಕೆ ಪ್ಲಾನ್ ಮಾಡಿವೆ. ಒಂದನೇ ತರಗತಿ ಹೋಗುವ ಮೊದಲು ಲೆವೆಲ್ ಒನ್ ಪರಿಚಯ ಮಾಡುತ್ತಿದೆ.
ಇತ್ತ ಈ ರೀತಿಯ ತರಗತಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ವಯೋಮಿತಿ ಕಡ್ಡಾಯದ ನಿಯಮವು ಖಾಸಗಿ ಶಾಲೆಗಳು ಹಣ ಲೂಟಿ ಮಾಡಲು ನಿಂತಿವೆ ಎಂದು ಆರೋಪಿಸಿದ್ದಾರೆ. ಒಂದನೇ ತರಗತಿ ಸೇರಲು ಆರು ವರ್ಷ ತುಂಬದೆ ಇದ್ದರೆ ಲೆವೆಲ್ ಒನ್ ಪರಿಚಯ ಮಾಡುತ್ತಿದೆ. ಇದು ಯಾವ ರೀತಿ ಎಂಬುದನ್ನು ಖಾಸಗಿ ಶಾಲೆಗಳೆ ಹೇಳಬೇಕೆಂದು ಕಿಡಿಕಾರಿದ್ದಾರೆ.