ಶಿವಮೊಗ್ಗ: ದೇಶ ಸದೃಢವಾಗಲು ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯ. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಜಿಲ್ಲೆಯ ಶಿಕಾರಿಪುರದ ಷಾ. ಧನರಾಜ್ ಹೇಮರಾಜ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದ ಆಯೋಜಿಸಿದ್ದ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವ, ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ | Congress Guarantee: ನೀವು ಹೇಳಿದಂತೆ ಗ್ಯಾರಂಟಿ ಯೋಜನೆ ಜಾರಿ ಆಗೋಲ್ಲ: ಸಿಎಂ ಸಿದ್ದರಾಮಯ್ಯಗೆ ಆರ್ಥಿಕ ಇಲಾಖೆ ಖಡಕ್ ಮಾತು
ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದಾರೆ, ಇದರ ಪ್ರಯೋಜನ ಪಡೆದು ಉತ್ತಮ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಇನ್ನು ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಪೋಷಕರು ಹಾಗೂ ಶಾಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ, ಪ್ರವೀಣ್ ಮಾಳಗಿ, ಬಿಆರ್‌ಒ ಮುರಳೀಧರ್, ಪುರಸಭಾ ಸದಸ್ಯರಾದ ಪಾಲಾಕ್ಷಪ್ಪ, ಫೈರೋಜಾ ಬಾನು, ಮೋಹನ್ ತ್ಯಾಗರ್ತಿ, ಪುಟ್ಟರಾಜು, ನರಸಿಂಹಮೂರ್ತಿ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೋಷಕರು, ಮಕ್ಕಳು ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.