Site icon Vistara News

ದೇವೇಗೌಡರಿಗೆ ಪಠ್ಯ ಪರಿಷ್ಕರಣೆ ಬಗ್ಗೆ ಮನವರಿಕೆ ಮಾಡಿದ್ದೇವೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಬಿ.ಸಿ.ನಾಗೇಶ್

ತುಮಕೂರು: ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ 169 ಪುಟಗಳಲ್ಲಿ 150 ತಪ್ಪುಗಳನ್ನು ಮಾಡಿತ್ತು. ನಮ್ಮ ಸರ್ಕಾರದಲ್ಲಿ ಕೇವಲ 17 ತಪ್ಪುಗಳಾಗಿದ್ದು, ಅವುಗಳನ್ನು ಸರಿಮಾಡಿದ್ದೇವೆ. ಈ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಮನವರಿಕೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಶನಿವಾರ ಮಾತನಾಡಿದ ಬಿ.ಸಿ. ನಾಗೇಶ್‌, ದೇವೇಗೌಡರಿಗೆ ಕುವೆಂಪು ಅವರ ಬಗ್ಗೆ ಕೆಲವರು ಏನೇನೋ ಹೇಳಿ ಬಿಟ್ಟಿದ್ದರು.‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರಿಂದ ನಾವು ಸತ್ಯವನ್ನು ಅವರ ಮುಂದೆ ಇಟ್ಟಿದ್ದೇವೆ. ಅವರು ಹಿರಿಯರು, ಗೌರವಾನ್ವಿತರು, ಹೀಗಾಗಿ ಅವರ ಮನೆಗೆ ಹೋಗಿ ಎಲ್ಲ ವಿಚಾರಗಳನ್ನು ತಿಳಿಸಿ ಬಂದಿದ್ದೇನೆ. ಅವರಿಗೆ ಸತ್ಯದ ಮನವರಿಕೆಯಾಗಿರುತ್ತದೆ ಎಂಬ ವಿಶ್ವಾಸವಿದೆ ಎಂದರು.

ಡಿ.ಕೆ.ಶಿವಕುಮಾರ್ ಪಠ್ಯಪುಸ್ತಕ ಹರಿದ ಬಗ್ಗೆ ಪ್ರತಿಕ್ರಿಯಿಸಿದ ನಾಗೇಶ್‌, ಸರಸ್ವತಿಯನ್ನು ಹರಿದು ಹಾಕುವ ಸಂಸ್ಕೃತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದರೆ ನಾವು ಕಣ್ಣಿಗೆ ಒತ್ತಿಕೊಂಡು ನಮಸ್ಕಾರ ಮಾಡುತ್ತೇವೆ. ಆದರೆ, ಡಿ.ಕೆ.ಶಿವಕುಮಾರ್ ಈಗ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ, ಅದಕ್ಕೆ ನಾವೇನೂ ಮಾಡುವುದಕ್ಕೆ ಆಗಲ್ಲ ಎಂದು ತಿಳಿಸಿದರು.

ರೋಹಿತ್ ಚಕ್ರತೀರ್ಥ ವಿರುದ್ಧ 2017ರಲ್ಲಿ ದೂರು ದಾಖಲಾಗಿತ್ತು. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಡಿ.ಕೆ. ಶಿವಕುಮಾರ್ ಸಚಿವರಾಗಿದ್ದರು. ಕುವೆಂಪು ಅವರಿಗೆ ಅವಮಾನ ಆಗಿದ್ದರೆ ಆಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದ ನಾಗೇಶ್‌, ಈಗಾಗಲೇ ಶೇ.75 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಮಾಹಿತಿ ನೀಡಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ | ಸಚಿವ ಅಶೋಕ್‌ ಹೇಳಿದ್ದು ಅಸತ್ಯ: ಪಠ್ಯ ಪರಿಷ್ಕರಣೆ ಕುರಿತು ಬರಗೂರು ರಾಮಚಂದ್ರಪ್ಪ ಉತ್ತರ

Exit mobile version