ಬೆಂಗಳೂರು: ಸ್ವಾತಂತ್ರ್ಯ ಬಂದ ನಂತರ ಕಾಲ ಕಾಲಕ್ಕೆ ಶಿಕ್ಷಣ ವ್ಯವಸ್ಥೆ ಪರಿಷ್ಕರಣೆ ಮಾಡುತ್ತಾ ಬಂದಿದ್ದೇವೆ. ಶಿಕ್ಷಣ ನೀತಿ ರೂಪಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಆದರೆ, ಈ ಬಾರಿಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ಗೆ ಸಂಬಂಧಿಸಿದಂತೆ ಯಾಕೆ ಪರ ವಿರೋಧ, ಚರ್ಚೆಗಳು ಆಗುತ್ತಿವೆ? ಈಗಿನ ಶಿಕ್ಷಣದಲ್ಲಿ ನಾವು ನಿರೀಕ್ಷೆ ಮಾಡಿದಂತಹ ಸುಧಾರಣೆಯನ್ನು ಕಾಣಲು ಸಾಧ್ಯವಾಗಿಲ್ಲ. ಹೀಗಾಗಿ ಹೊಸ ಶಿಕ್ಷಣ ನೀತಿಯ (NEP 2020) ಅಗತ್ಯವಿದೆ ಎಂದು ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದ್ದಾರೆ.
ಜಯನಗರದ 9ನೇ ಬ್ಲಾಕ್‌ನ ಜೈನ್ ಯನಿವರ್ಸಿಟಿ ಕ್ಯಾಂಪಸ್‌ನಲ್ಲಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಬೆಂಗಳೂರು ದಕ್ಷಿಣ ವತಿಯಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 (NEP 2020) ಜಾರಿ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಗುರುವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಶಿಕ್ಷಣದ ಕುರಿತಾಗಿ ವಾಸ್ತವದಲ್ಲಿ ನಮ್ಮ ಆಲೋಚನೆ, ಕಲ್ಪನೆ ಏನು? ಈ ಹಿಂದೆ ಏನಿತ್ತು ಎಂಬುವುದರ ಬಗ್ಗೆ ತಿಳಿಯಬೇಕು. ಶಿಕ್ಷಣದಲ್ಲಿ ನಾವು ನಿರೀಕ್ಷೆ ಮಾಡಿದಂತಹ ಸುಧಾರಣೆಯನ್ನು ಕಾಣಲು ಸಾಧ್ಯವಾಗಿಲ್ಲ. ಅದಕ್ಕೆ ಬುದ್ಧ್ಯಾಪೂರ್ವಕ ಕಾರಣ ಇರಬಹುದು, ಮೈಮರೆವಿನ ಕಾರಣವೂ ಇರಬಹುದು ಅಥವಾ ಬೇರೆ ಬೇರೆ ಸೈದ್ಧಾಂತಿಕ ಕಾರಣಗಳು ಇರಬಹುದು. ಇದರಿಂದ ನಾವು ನಿರೀಕ್ಷಿತ ಮಟ್ಟದ ಶಿಕ್ಷಣ ವ್ಯವಸ್ಥೆ ರೂಪಿಸಲು ಸಾಧ್ಯವಾಗಿಲ್ಲ ಎನ್ನಬಹುದು ಎಂದು ಹೇಳಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ: ಚುನಾವಣೆಯ ಬಿರುಗಾಳಿಯಲ್ಲಿ ರಾಜಕೀಯದ ಗಿರಿಗಿಟ್ಟಿ
ಶಿಕ್ಷಣ ಎಂದರೆ ಉದ್ಯೋಗ ಪಡೆಯಲು ಇರುವಂತಹ ಸಾಧನ ಎಂದು ನಾವೆಲ್ಲಾ ಭಾವಿಸಿದ್ದೇವೆ. ಆದರೆ, ಅದರಿಂದ ನಿರೀಕ್ಷಿತ ಫಲ ಸಾಧ್ಯವೇ ಎಂದು ಕೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇವೆ. ಅದೇ 20 ವರ್ಷಗಳ ಹಿಂದೆ ಈ ಸ್ಥಿತಿ ಇರಲಿಲ್ಲ. ಆಗ ಶಿಕ್ಷಣ ಪಡೆದು ಉದ್ಯೋಗ ಗಳಿಸುವುದೇ ಮುಖ್ಯವಾಗಿತ್ತು. ಆದರೆ, ಈಗಲೂ ನಮ್ಮ ಪದವಿಗಳು ಎಷ್ಟು ಮಂದಿಗೆ ಉದ್ಯೋಗ ನೀಡುತ್ತದವೆ ಎಂದು ಆಲೋಚನೆ ಮಾಡಿಕೊಂಡಿರಬೇಕಾ ಎಂದರೆ, ಇಲ್ಲ ಎನ್ನಲೇಬೇಕು. ಯಾಕೆಂದರೆ ಈಗ ರಾಷ್ಟ್ರ ನಿರ್ಮಾಣ ಪ್ರಮುಖವಾಗುತ್ತದೆ ಎಂದು ತಿಳಿಸಿದರು.
ವ್ಯಕ್ತಿಗಳ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ
ರಾಷ್ಟ್ರ ನಿರ್ಮಾಣವು ಕಂಪನಿಗಳು, ಶ್ರೀಮಂತರನ್ನು ಸೃಷ್ಟಿಸುವುದರಿಂದ ಅಥವಾ ಪದವಿಗಳಿಂದ ಆಗದು. ವ್ಯಕ್ತಿಗಳ ನಿರ್ಮಾಣದಿಂದ ಇದು ಸಾಧ್ಯ. ವ್ಯಕ್ತಿಗಳ ನಿರ್ಮಾಣ ಎಂದರೆ ಉದ್ಯೋಗ ಅರಸುವವರು ಅಲ್ಲ, ಉದ್ಯೋಗ ಕೊಡುವಂತಹವರು ಆಗಬೇಕು. ಇಂತಹ ಆಲೋಚನೆಯನ್ನು ನಾವು ಬಿತ್ತಿದಾಗ ಉದ್ಯೋಗ ಮಾಡುವವನ ಗುಣಮಟ್ಟ ಕೂಡ ಉತ್ತಮ ಪಡಿಸಲು ಸಾಧ್ಯವಾಗುತ್ತದೆ. ಈ ರೀತಿಯ ಆಶಾಭಾವನೆಯಿಂದ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಈಗಾಗಲೇ ಜಾರಿಯಾಗಿದೆ. ವಿಶೇಷವಾಗಿ ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ರಾಜ್ಯವಾಗಿದೆ. ಹಾಗೆಯೇ ಇಲ್ಲಿ ರಾಜಕೀಯ ಸ್ಥಿತ್ಯಂತರ ಕೂಡ ಅಗಿರುವುದರಿಂದ, ನಾವು ಇದರ ಬಗ್ಗೆ ವಿಶೇಷವಾದ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ನಾವು ಪ್ರಶ್ನೆ ಕೇಳುವವರು ಆಗಬಾರದು, ಉತ್ತರ ಕೊಡುವವರು ಆಗಬೇಕು ಎಂದು ತಿಳಿಸಿದರು.
ಜಾಗತಿಕ ಪೈಪೋಟಿ ಎದುರಿಸಲು ಎನ್‌ಇಪಿ ಅನಿವಾರ್ಯ
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನಿಕಟಪೂರ್ವ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ ಮಾತನಾಡಿ, ನಮಗೆ ಗೊತ್ತಿರುವ ಹಾಗೆ, ನಮ್ಮ ಪದವೀಧರರ ಪದವಿಗಳು ಕಾಗದದ ಮೇಲೆ ಪ್ರಮಾಣಪತ್ರಗಳಾಗಿ ಉಳಿದಿದ್ದು, ಉದ್ಯೋಗಕ್ಕೆ ಅರ್ಹವಿಲ್ಲದಂತಾಗಿದೆ. ನಮಗೆ ಉದ್ಯೋಗಗಳಿಗೆ ಸಾಕಷ್ಟು ಕೌಶಲಯುಳ್ಳವರು ಬೇಕಾಗಿದ್ದಾರೆ. ಆದರೆ, ಉದ್ಯೋಗಗಳ ಬೇಡಿಕೆಗೆ ತಕ್ಕಂತೆ ಕೌಶಲಯುತ ಮಾನವ ಸಂಪನ್ಮೂಲ ಲಭ್ಯವಾಗುತ್ತಿಲ್ಲ. ಹೀಗಾಗಿ ಎಲ್ಲ ಸರ್ಕಾರಗಳು ಉದ್ಯೋಗ ಪಡೆಯಲು ಕೌಶಲ ಹೆಚ್ಚಿಸುವುದು ಹಾಗೂ ವಿದ್ಯಾರ್ಥಿಗಳನ್ನು ಉದ್ಯಮಿಗಳಾಗಿ ಮಾಡುವುದು ಹೇಗೆ ಎಂಬುವುದರ ಬಗ್ಗೆ ಆಲೋಚನೆ ಮಾಡುತ್ತಿವೆ ಎಂದು ತಿಳಿಸಿದರು.
ಇದನ್ನೂ ಓದಿ | IISc Bangalore: ದೇಶದ 91 ವಿವಿಗಳಲ್ಲಿ ಐಐಎಸ್‌ಸಿ ಬೆಂಗಳೂರು ಟಾಪ್; ಮತ್ಯಾವ ವಿವಿಗೆ ಸ್ಥಾನ?
ಎಲ್ಲೆಡೆ ಯಾಂತ್ರೀಕರಣ, ಖಾಸಗೀಕರಣ, ಜಾಗತೀಕರಣವಾಗುತ್ತಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ಎದುರಿಸಲು ಪದವೀಧರರನ್ನು ತಯಾರಿಸಬೇಕಾದ ಅಗತ್ಯವಿದೆ. ಖಾಸಗೀಕರಣದಿಂದ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ನಾವು ನಮ್ಮ ಪದವೀಧರರನ್ನು ತಯಾರು ಮಾಡಬೇಕು. ಮತ್ತೊಂದೆಡೆ ಯಾಂತ್ರೀಕರಣದಿಂದ ಎಲ್ಲ ಕೆಲಸಗಳನ್ನು ಯಂತ್ರಗಳೇ ನಿರ್ವಹಿಸುತ್ತಿವೆ. ಹೀಗಾಗಿ ಪರಿಸ್ಥಿತಿ ಬದಲಾವಣೆ ಆದಾಗ, ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು. ಇದಕ್ಕಾಗಿ ಕೌಶಲಯುಕ್ತ ಪದವೀಧರರನ್ನು ಸೃಷ್ಟಿ ಮಾಡಬೇಕು. 21ನೇ ಶತಮಾನದ ಶಿಕ್ಷಣ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಗಳು ಆಗಬೇಕು ಎನ್ನುವ ಅಂಶಗಳನ್ನು ಎನ್‌ಇಪಿ 2020 ಹೊಂದಿದೆ ಎಂದು ತಿಳಿಸಿದರು.