ವಿಜಯನಗರ: ಕಣ್ಣಿಗೆ ಪೂರ್ತಿಯಾಗಿ ಕಾಮದ ಪೊರೆಯನ್ನೇ ಕಟ್ಟಿಕೊಂಡವರಿಗೆ ಕಣ್ಣುಕಾಣದ ವೃದ್ಧೆಯಾದರೇನು? ಆಗಿನ್ನೂ ಕಣ್ಬಿಟ್ಟ ಹಸುಳೆಯಾದರೇನು? ತಮ್ಮ ವಿಕೃತಿಯ ಪ್ರದರ್ಶನವನ್ನು ಮಾಡುತ್ತಾರೆ. ಇದೀಗ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಾಪುರ ತಾಂಡಾದಲ್ಲಿ ಕಾಮುಕನೊಬ್ಬ ಕಣ್ಣುಕಾಣದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ನೋವು-ಅವಮಾನ ಸಹಿಸಲಾಗದೆ ವೃದ್ಧೆ ವಿಷ ಕುಡಿದು ಪ್ರಾಣ ಬಿಟ್ಟಿದ್ದಾರೆ (Old woman suicide).
ತಾಂಡಾ ನಿವಾಸಿಯಾದ 58 ವರ್ಷದ ವೃದ್ಧೆಯ ಮೇಲೆ, ಅದೇ ತಾಂಡಾ ನಿವಾಸಿಯಾದ ಲೋಕೇಶ್ ನಾಯ್ಕ್ ಎಂಬಾತ ಅತ್ಯಾಚಾರ ಮಾಡಿದ್ದಾನೆ. ಆ ವೃದ್ಧೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಮದುವೆಯಾಗಿ ಮಕ್ಕಳಿದ್ದರು. ಮನೆಯವರೆಲ್ಲ ಹತ್ತಿರದ ಸಂಬಂಧಿಕರ ಮದುವೆಗೆ ಹೋಗಿದ್ದರು. ಅದೇ ವೇಳೆ ಲೋಕೇಶ್ ನಾಯ್ಕ್, ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದಿದ್ದಾನೆ. ಅಂಧ ವೃದ್ಧೆಯ ಮೇಲೆ ರೇಪ್ ಮಾಡಿದ ಬಳಿಕ ಅವರಿಗೆ ಥಳಿಸಿದ್ದಾನೆ. ಆತ ಅತ್ತ ಹೋಗುತ್ತಿದ್ದಂತೆ, ವೃದ್ಧೆ ವಿಷ ಸೇವಿಸಿದ್ದಾರೆ. ಲೋಕೇಶ್ ನಾಯ್ಕ್ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಸ್ಥಳೀಯರು ಗರಂ ಆಗಿದ್ದಾರೆ. ಲೋಕೇಶ್ನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿನ್ನಾಭರಣಕ್ಕಾಗಿ ಉಸಿರುಗಟ್ಟಿಸಿ ವೃದ್ಧೆ ಹತ್ಯೆ: ಕೊಲೆ ಮಾಡುತ್ತಾರೆಂದು ಮೊದಲೇ ಹೇಳಿದ್ದರೂ ನಿರ್ಲಕ್ಷ್ಯ?
ಹಾಸನದಲ್ಲೂ ನಡೆದಿತ್ತು ಇಂಥ ಘಟನೆ!
ಇತ್ತೀಚೆಗೆ ಹಾಸನದಲ್ಲಿ ಯುವಕನೊಬ್ಬ 85ವರ್ಷದ ವೃದ್ಧೆಯನ್ನು ಕೊಂದು, ಬಳಿಕ ಅತ್ಯಾಚಾರ ಮಾಡಿದ್ದ. ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಆದರೆ ಅವರು ಪ್ರತಿರೋಧ ಒಡ್ಡಿದ್ದರು. ಇದರಿಂದ ಕುಪಿತಗೊಂಡ ಯುವಕ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ. ವೃದ್ಧೆಯ ಶವದ ಮೇಲೆ ರೇಪ್ ಮಾಡಿದ್ದ. ಅವನನ್ನು ಪೊಲೀಸರು ಬಂಧಿಸಿದ್ದಾರೆ.