ಹೊನ್ನಾವರ: ವಿಧಾನಸಭಾ ಚುನಾವಣೆ (Karnataka ELection 2023) ಸಮೀಪಿಸುತ್ತಿದೆ. ಈಗಾಗಲೇ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇನ್ನು ಮತದಾನಕ್ಕೆ ಮುಂಚಿನ ದಿನಗಳಲ್ಲಿ ಹಣ-ಹೆಂಡ ಹಂಚಿಕೆಯ ಆರೋಪಗಳು ಕೇಳಿಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಹೊನ್ನಾವರ ತಾಲೂಕಿನ ದಂಪತಿಯ ಚಿಂತನೆ ಎಲ್ಲರ ಗಮನ ಸೆಳೆದಿದೆ. ತಾಲೂಕಿನ ಹರಡಸೆಯ ಭಾರತಿ ಮತ್ತು ವಾಸು ನಾಯ್ಕ್ ದಂಪತಿಯ ಮಗ “ಭುವನ್” ನ ಐದನೇ ವರ್ಷದ ಜನ್ಮದಿನದ ಆಚರಣೆಯಲ್ಲಿ ಕೇಕ್ ಮೇಲೆ ಮತದಾನದ ಜಾಗೃತಿ ಬರಹ ಈಗ ಸಖತ್ ವೈರಲ್ (Video Viral) ಆಗಿದೆ.
ಜನ್ಮ ದಿನವನ್ನು ಆಚರಿಸಿಕೊಳ್ಳುವವರ ಹೆಸರನ್ನು ಕೇಕ್ ಮೇಲೆ ಬರೆಸುವುದು ರೂಢಿ. ಆದರೆ, ಇಲ್ಲಿ ಬಾಲಕ “ಭುವನ್” ಹೆಸರಿನ ಬದಲಿಗೆ “ಚುನಾವಣೆ ವ್ಯಾಪಾರ ಅಲ್ಲ, ನಿಮ್ಮ ಮತ ಮಾರಾಟ ಮಾಡಬೇಡಿ” ಎಂಬ ಮತದಾನ ಜಾಗೃತಿಯ ಕುರಿತಾದ ಅರ್ಥಪೂರ್ಣವಾದ ವಾಕ್ಯವನ್ನು ಇಂಗ್ಲಿಷ್‌ನಲ್ಲಿ ಕೇಕ್ ಮೇಲೆ ಬರೆಸಲಾಗಿತ್ತು.
ಈ ಸಂದರ್ಭದಲ್ಲಿ ಹಿತೈಷಿ ನರಸಿಂಹ ನಾಯ್ಕ್ ಮಾತನಾಡಿ, “ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ಮತದಾರನ ಮತವೂ ಅತ್ಯಮೂಲ್ಯವಾದದ್ದು. ನಾವು ಜಾಗೃತರಾಗಿದ್ದರೆ ಮತವು ಸರಿಯಾದ ವ್ಯಕ್ತಿಗೆ ಹೋಗುತ್ತದೆ. ಒಂದು ವೇಳೆ ನಾವು ಯೋಗ್ಯ ಅಭ್ಯರ್ಥಿಗೆ ಮತ ನೀಡದೆ ಮನೆಯಲ್ಲೇ ಉಳಿದರೆ, ಪರೋಕ್ಷವಾಗಿ ಪ್ರಯೋಜನ ಇಲ್ಲದ ವ್ಯಕ್ತಿಗೆ ಒಂದು ಮತ ನೀಡಿದಂತೆ ಆಗುತ್ತದೆ. ಆದ್ದರಿಂದ ಮತದಾರರಾದ ನಾವೆಲ್ಲ ಜಾಗೃತರಾಗಬೇಕು ಮತ್ತು ಜವಾಬ್ದಾರಿಯುತರಾಗಬೇಕಿದೆ ಎಂದರು.
ವಿಡಿಯೊ ವೈರಲ್
ಇನ್ನು “ELECTION ARE NOT BUSINESS. DO NOT SELL YOUR VOTES” ಎಂಬ ಕೇಕ್ ಮೇಲಿನ ಬರಹದ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.