Site icon Vistara News

Election Boycott: ಸೇತುವೆ ಕಾಮಗಾರಿ ಆರಂಭಿಸದಿದ್ದರೆ ಚುನಾವಣೆ ಬಹಿಷ್ಕಾರ: ಅಜ್ಜರಣಿ, ಮತ್ತುಗುಣಿ ಖಡಕ್‌ ವಾರ್ನಿಂಗ್

Election Boycott banavasi

#image_title

ಬನವಾಸಿ: ಸೇತುವೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು. ಇಲ್ಲವಾದಲ್ಲಿ 2023ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ (Election Boycott) ಮಾಡುತ್ತೇವೆ ಎಂಬ ಬ್ಯಾನರ್ ಕಟ್ಟಿ ಶಿರಸಿ ತಾಲೂಕಿನ ಅಜ್ಜರಣಿ ಹಾಗೂ ಮತ್ತು ಗುಣಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

ತಾಲೂಕಿನ ಪೂರ್ವ ಭಾಗ ಬನವಾಸಿಯ ಈ ಎರಡು ಗ್ರಾಮಗಳು ಒಮ್ಮತದ ತೀರ್ಮಾನ ಕೈಗೊಂಡಿವೆ. ಗುಡ್ನಾಪುರ ಗ್ರಾ.ಪಂಗೆ ಒಳಪಡುವ ಈ ಗ್ರಾಮಗಳು ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತವೆ. ಇಲ್ಲಿಗೆ ಸಮೀಪದ ವರದಾ ನದಿಯ ಹಿನ್ನೀರಿಗೆ ಮಾಡಿದ್ದ ಪುರಾತನ ಸೇತುವೆ ಸಂಪೂರ್ಣವಾಗಿ ಹಾಳಾಗಿತ್ತು. 3 ವರ್ಷಗಳ ಹಿಂದೆ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದರು. ಗುತ್ತಿಗೆದಾರರು ಹಳೆಯ ಸೇತುವೆಯನ್ನು ಕೆಡವಿ ಕಾಮಗಾರಿ ಚಾಲನೆಗೆ ಶುರು ಮಾಡಿದ ಕೆಲವೇ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಂಡು 3 ವರ್ಷಗಳೇ ಗತಿಸಿತು. ಕಳೆದ ಎರಡು ವರ್ಷದ ಮಳೆಗಾಲದಲ್ಲಿ ಈ ಎರಡು ಊರಿನ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸಿದರು. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಅಸಮರ್ಪಕ ಸೇತುವೆ

ಇದನ್ನೂ ಓದಿ: Modi In Karnataka: ಮಾ. 25ರಂದು ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ; ಮೆಡಿಕಲ್‌ ಕಾಲೇಜು ಉದ್ಘಾಟನೆ

ಜಿಲ್ಲಾಧಿಕಾರಿಗಳು ಎರಡು ಬಾರಿ ಬಂದು ಭರವಸೆ ನೀಡಿದ್ದು ಬಿಟ್ಟರೆ ಕಾಮಗಾರಿ ಆಗಲಿಲ್ಲ. ಸುಮಾರು 300 ಮನೆಗಳಿರುವ ಊರಿಗೆ ಸಮರ್ಪಕ ಸೇತುವೆ ಇಲ್ಲದೇ ಶಾಲಾ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಬೇಸತ್ತು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸೇತುವೆ ಕಾಮಗಾರಿ ಆರಂಭಿಸದೇ ಇದ್ದರೆ ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥ ಬಸವರಾಜ ಹೇಳಿದ್ದಾರೆ.

ಚುನಾವಣಾ ಬಹಿಷ್ಕಾರದ ಬ್ಯಾನರ್ ತೆರವು

ಸೇತುವೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಅಜ್ಜರಣಿ ಹಾಗೂ ಮತ್ತುಗುಣಿ ಗ್ರಾಮಸ್ಥರು ಹಾಕಿದ್ದ ಚುನಾವಣಾ ಬಹಿಷ್ಕಾರದ ಬ್ಯಾನರ್ ಅನ್ನು ಗುರುವಾರ (ಮಾ.23) ಗ್ರಾಮಸ್ಥರು ತೆರವು ಮಾಡಿದರು.

ಬ್ಯಾನರ್ ಅಳವಡಿಸಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಿರಸಿ ತಹಸೀಲ್ದಾರ್ ಡಾ. ಸುಮಂತ್ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಒಂದು ತಿಂಗಳಲ್ಲಿ ಸೇತುವೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ ನಂತರ ಬ್ಯಾನರ್ ತೆರವುಗೊಳಿಸಲಾಯಿತು.

ಈ ಕುರಿತು ತಹಸೀಲ್ದಾರ ಡಾ.ಸುಮಂತ್ ಮಾತನಾಡಿ, “ಸೇತುವೆಯ ಪಕ್ಕದಲ್ಲಿರುವ ಗದ್ದೆ ಮಾಲೀಕರ ಜಮೀನಿನ ವಾರಸ ಸೇರ್ಪಡೆ ಹಾಗೂ ಕಾಮಗಾರಿಗೆ ಮರು ಟೆಂಡರ್ ಕರೆಯುವ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಸಿ ಒಂದು ತಿಂಗಳಲ್ಲಿ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: NTR 30: ಎನ್‌ಟಿಆರ್‌ 30 ಮುಹೂರ್ತ; ರಾಜಮೌಳಿಗೆ ಜೂನಿಯರ್ ಎನ್‌ಟಿಆರ್ ಬೆಚ್ಚಗಿನ ಅಪ್ಪುಗೆ

Exit mobile version