ಬೆಂಗಳೂರು: ಮತದಾರರ ಮಾಹಿತಿ ಮತ್ತು ದತ್ತಾಂಶಗಳನ್ನು ಕಳವು-ಮಾರಾಟ ಮಾಡಿದ ಆರೋಪದಡಿ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಬಂಧನವಾಗಿದೆ. ಅದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಚಿಲುಮೆ ಸಂಸ್ಥೆಯ ಸಿಬ್ಬಂದಿ ಬಿಎಲ್ಒಗಳ ಐಡಿ ಕಾರ್ಡ್ ಧರಿಸಿ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿದ್ದರು. ಈ ಅಕ್ರಮ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಇಡೀ ರಾಜ್ಯಕ್ಕೆ ವ್ಯಾಪಿಸಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು. ಪೊಲೀಸ್ ತನಿಖೆ ಸಮಾಧಾನ ತಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಕಾಂಗ್ರೆಸ್ ನಾಯಕರಿಂದ ಚುನಾವಣಾ ಅಕ್ರಮದ ದೂರು ಹೋಗುತ್ತಿದ್ದಂತೆ, ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜೇಯ್ ಭದು ಮತ್ತು ಇತರ ಅಧಿಕಾರಿಗಳು ಆಗಮಿಸಿ, ರಾಜ್ಯ ಚುನಾವಣಾ ಮುಖ್ಯ ಅಧಿಕಾರಿ ಮನೋಜ್ ಕುಮಾರ್ ಮೀನಾರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ನಾಯಕರ ದೂರಿನಲ್ಲಿ ಇರುವ ಅಂಶಗಳನ್ನು ಪ್ರಸ್ತಾಪಿಸಿ, ಅಗತ್ಯ ಮಾಹಿತಿ ಪಡೆದು ತೆರಳಿದ್ದಾರೆ. ಅವರು ಬಳಿಕ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರನ್ನೂ ಭೇಟಿಯಾದರು.
ಇನ್ನು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯ ಚುನಾವಣಾ ಮುಖ್ಯಾಧಿಕಾರಿಯನ್ನು ಭೇಟಿಯಾದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಮತ್ತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕೂಡ ತೆರಳಿ, ಮನೋಜ್ ಕುಮಾರ್ ಮೀನಾರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.
ಇದನ್ನೂ ಓದಿ:Voter Data | ಗುಜರಾತ್ ಚುನಾವಣೆಗೂ ತಟ್ಟಲಿದೆಯೇ ʼಚಿಲುಮೆʼ ಅಕ್ರಮ ಬಿಸಿ?: ನವದೆಹಲಿಯತ್ತ ಹೊರಟ ಕಾಂಗ್ರೆಸ್