Site icon Vistara News

Shivamogga News: ಸೊರಬ; ಚಂದ್ರಗುತ್ತಿ, ಬಾರಂಗಿ ಗ್ರಾ.ಪಂಗಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Election of new president and vice president for Chandragutti Grama Panchayat

ಸೊರಬ: ತಾಲೂಕಿನ ಚಂದ್ರಗುತ್ತಿ (Chandragutti)ಹಾಗೂ ಬಾರಂಗಿ ಗ್ರಾಮ ಪಂಚಾಯಿತಿಗಳಿಗೆ (Barangi Grama Panchayat) ಸೋಮವಾರ ಅಧ್ಯಕ್ಷ-ಉಪಾಧ್ಯಕ್ಷ‌ (President and Vice president) ಸ್ಥಾನಕ್ಕೆ ಚುನಾವಣೆ ನಡೆಯಿತು.

ಚಂದ್ರಗುತ್ತಿ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಬೆಂಬಲಿತರಾದ ಸರಿತಾ ಕೃಷ್ಣಪ್ಪ ಅಧ್ಯಕ್ಷರಾಗಿ ಹಾಗೂ ಎಂ.ಬಿ. ರೇಣುಕಾಪ್ರಸಾದ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

14 ಸದಸ್ಯರ ಬಲ ಇರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಪ.ಜಾ. ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸರಿತಾ ಕೃಷ್ಣಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ಬಿ. ರೇಣುಕಾ ಪ್ರಸಾದ್ 7 ಮತಗಳನ್ನು ಪಡೆದರೆ, ತಿರುಪತಿ 6 ಮತಗಳ ಪಡೆದರು. ಒಂದು ಮತ ತಿರಸ್ಕಾರಗೊಂಡಿತು. ಎಂ.ಬಿ. ರೇಣುಕಾಪ್ರಸಾದ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಇದನ್ನೂ ಓದಿ: Mahila Satyagraha Smaraka: ಧೀರ ಮಹಿಳೆಯರ ಹೋರಾಟ ನೆನಪಿಸುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ

ಚುನಾವಣಾಧಿಕಾರಿಯಾಗಿ ದಂಡಾವತಿ ಜಲಾಶಯ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಯು.ಎಸ್. ಸಂಪತ್ ಕುಮಾರ್ ಕಾರ್ಯನಿರ್ವಹಿಸದರು. ಗ್ರಾಪಂ ಪಿಡಿಒ ನಾರಾಯಣಮೂರ್ತಿ ಸಹಕರಿಸಿದರು. ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಪಂ ನೂತನ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಪಂಚಾಯಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು. ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಪಕ್ಷದ ಮುಖಂಡರು ಹಾಗೂ ಪಂಚಾಯಿತಿಯ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಗ್ರಾಪಂ ನೂತನ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಹೆಸರನ್ನು ತರುವ ನಿಟ್ಟಿನಲ್ಲಿ ಗ್ರಾಪಂನಲ್ಲಿ ಕಾರ್ಯನಿರ್ವಹಿಸಲಾಗುವುದು. ಚಂದ್ರಗುತ್ತಿ ಕ್ಷೇತ್ರ ರಾಜ್ಯದಲ್ಲಿ ಗುರುತಿಸಿಕೊಂಡಿದ್ದು, ತಮಗೆ ದೊರೆತಿರುವ ಅಧಿಕಾರವನ್ನು ಪಂಚಾಯಿತಿಯನ್ನು ತಾಲೂಕಿನಲ್ಲಿಯೇ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಚ್. ಗಣಪತಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 25 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರು ಸಚಿವರಿದ್ದು, ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಬಡವರ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೆ ತಂದ ಯೋಜನೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜತೆಗೆ ಶ್ರೀ ಕ್ಷೇತ್ರದಲ್ಲಿ ಅಧಿದೇವತೆ ಶ್ರೀ ರೇಣುಕಾಂಬೆ ನೆಲೆ ನಿಂತು, ಲಕ್ಷಾಂತರ ಭಕ್ತ ಸಮೂಹವಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿ ಕಡೆಗೂ ಗಮನ ನೀಡುವಂತೆ ತಿಳಿಸಿದರು.

ಇದನ್ನೂ ಓದಿ: Weather Report : ರಾಜ್ಯದ ಹಲವೆಡೆ 50-50 ಮಳೆಯಾಟ!

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಿಲ್ಪಾ, ಲಕ್ಷ್ಮಿ ಚಂದ್ರಪ್ಪ, ಎಂ.ಪಿ. ರತ್ನಾಕರ, ಎಸ್.ಕೆ. ರಾಜಶೇಖರ, ಶ್ರೀಮತಿ, ಲಕ್ಷ್ಮೀ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಲ್ಲಾ ಉಪಾಧ್ಯಕ್ಷ ಡಾ. ಆರ್. ಶ್ರೀಧರ್ ಹುಲ್ತಿಕೊಪ್ಪ, ಮುಖಂಡರಾದ ಎಚ್.ಗಣಪತಿ, ಎಂ.ಡಿ. ಶೇಖರ್, ಗಣಪತಿ ನಾಯ್ಕ್, ಎನ್.ಜಿ. ನಾಗರಾಜ್, ಸುನೀಲ್ ಗೌಡ, ಪ್ರಭಾಕರ ಶಿಗ್ಗಾ, ಗಣೇಶ್ ಮರಡಿ, ವಿನಾಯಕ ಶೇಟ್, ಪರಮೇಶ್, ನಾಗರಾಜ ಬಸ್ತಿಕೊಪ್ಪ, ಸೇರಿದಂತೆ ಇತರರಿದ್ದರು.

ಬಾರಂಗಿ ಗ್ರಾಮ ಪಂಚಾಯಿತಿ

ಸೊರಬ ತಾಲೂಕಿನ ಬಾರಂಗಿ ಗ್ರಾಮ ಪಂಚಾಯಿತಿಗೆ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾದ ಕಲಾವತಿ ಮಂಜಪ್ಪ ಅಧ್ಯಕ್ಷರಾಗಿ ಹಾಗೂ ಭಾಗ್ಯ ಬಸವರಾಜ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸೊರಬ ತಾಲೂಕಿನ ಬಾರಂಗಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಲಾವತಿ ಮಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಭಾಗ್ಯ ಬಸವರಾಜ್ ಆಯ್ಕೆಯಾದರು.

11 ಸದಸ್ಯರ ಬಲ ಇರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಪ.ಜಾ.ಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬೆಣ್ಣಿಗೇರಿ ವಾರ್ಡ್‌ನ ಕಲಾವತಿ ಮಂಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಾರಂಗಿ ವಾರ್ಡ್‌ನ ಭಾಗ್ಯ ಬಸವರಾಜ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ನೇಮಿಚಂದ್ರ ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು. ಪಿಡಿಒ ಶಿವರಾಜ್ ಸಹಕರಿಸಿದರು. ಇಬ್ಬರು ಸದಸ್ಯರು ಗೈರಾಗಿದ್ದರು.

ಗ್ರಾಪಂ ನೂತನ ಅಧ್ಯಕ್ಷೆ ಕಲಾವತಿ ಮಂಜಪ್ಪ ಮಾತನಾಡಿ, ಪಂಚಾಯಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು. ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಪಕ್ಷದ ಮುಖಂಡರು ಹಾಗೂ ಪಂಚಾಯಿತಿಯ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ಇದನ್ನೂ ಓದಿ: Independence Day 2023; ಸಚಿನ್​ರಿಂದ ​ ಕೊಹ್ಲಿವರೆಗೆ ಸ್ವಾತಂತ್ರ್ಯ ಸಂಭ್ರಮ ಹೇಗಿತ್ತು!

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಸರೋಜಮ್ಮ, ಗಿರಿಜಾದೇವಿ, ಬಸವರಾಜ ಉಪ್ಪಾರ್, ಮಂಜುನಾಥ್ ಹೊನ್ನಾಳಿ, ಶಿವರಾಜ ಇಂಗಳಗುಂದಿ, ಕೆಂಚಮ್ಮ ಲಿಂಗಮೂರ್ತಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್, ಮುಖಂಡರಾದ ಬಸವರಾಜ ಹೊಳಗೊಂಡರ್, ಸಿದ್ದೇಶ್ವರ ಬಾಸೂರು, ಶಿವಲಿಂಗಪ್ಪ ಅಂಗಡಿ, ಪ್ರಭು ಬೆಣ್ಣಿಗೇರಿ, ಚಂದ್ರೇಗೌಡ್ರು, ಅಜ್ಜಪ್ಪ ಸಿದ್ದಾಪುರ, ಮಂಜಪ್ಪ ಸಣ್ಣಕಲ್ಲಿ, ಶಿವಪ್ಪ, ಹೊನ್ನಪ್ಪ ಸೇರಿದಂತೆ ಇತರರಿದ್ದರು.

Exit mobile version