ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ವೈಯಾರದಿಂದ ಸಾಗುವ ಎಲೆಕ್ಟ್ರಿಕ್ ಬಸ್‌ಗಳ (Electric bus) ವ್ಯವಸ್ಥೆ ನಿರ್ವಹಣೆ ಸರಿಯಾಗಿಲ್ಲ ಎನ್ನುವ ಸಂಗತಿ ಈ ಸೇವೆ ಆರಂಭವಾಗಿ ಆರೇ ತಿಂಗಳಲ್ಲಿ ಹೊರಬಿದ್ದಿದೆ. ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳ ಕೊರತೆಯೂ ಸೇರಿದಂತೆ ಕೆಲವೊಂದು ತಾಂತ್ರಿಕ ವಿಚಾರಗಳು ಆಗಲೇ ಚರ್ಚೆಯಲ್ಲಿವೆ. ಇದರ ಜತೆಗೆ ಸೇವೆ ಆರಂಭವಾಗಿ ಆರೇ ತಿಂಗಳಲ್ಲಿ ನೌಕರರ ಪ್ರತಿಭಟನೆ ಆರಂಭಗೊಂಡಿದೆ. ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ ಎನ್ನುವುದೂ ಸೇರಿದಂತೆ ಹಲವು ಬೇಡಿಕೆಗಳು ಪ್ರತಿಭಟನಕಾರರದ್ದು.
ಕಳೆದ 6 ತಿಂಗಳ ಹಿಂದೆ ಆರಂಭಗೊಂಡ ನೋವೋ ಬಸ್ ಟ್ರಾನ್ಸಿಟ್ ಸಿಸ್ಟಮ್ಪ್ರೈ ವೇಟ್ ಲಿಮಿಟೆಡ್ ಮತ್ತು ಸ್ವೀಚ್ ಕಂಪನಿಯಿಂದ ಎಲೆಕ್ಟ್ರಿಕ್ ಬಸ್‌ಗಳ ನೌಕರರಿಗೆ ಸೂಕ್ತವಾದ ವ್ಯವಸ್ಥೆ ಆಗಿಲ್ಲ ಎನ್ನುವುದು ಆರೋಪ. ಹೀಗಾಗಿ ಸೋಮವಾರ ಡಿಪೋದಿಂದ ಬಸ್‌ಗಳನ್ನು ಹೊರ ತೆಗೆಯದೆ ಬಿಎಂಟಿಸಿ ಖಾಸಗಿ ಎಲೆಕ್ಟ್ರಿಕ್ ಬಸ್ ಚಾಲಕರ ಪ್ರತಿಭಟನೆ ನಡೆಯುತ್ತಿದೆ.
ಯಲಹಂಕದಲ್ಲಿರುವ ಪುಟ್ಟೇನಹಳ್ಳಿಯ ಬಿಎಂಟಿಸಿ ಘಟಕ 30ರಲ್ಲಿ ಕೆಲಸ ಮಾಡುತ್ತಿರುವ ನೌಕರರಿಂದ ಪ್ರತಿಭಟನೆ ಪ್ರತಿಭಟನೆ ನಡೆಯುತ್ತಿದೆ. ಕಳೆದ ಆರು ತಿಂಗಳಿನಿಂದ ಸರಿಯಾಗಿ ಸಂಬಳ ನೀಡದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದಾಗಿ ನೌಕರರು ಹೇಳಿಕೊಂಡಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳೇನು?
-ಸಂಬಳದ ಚೀಟಿ ಕೊಡಬೇಕು.
ಕೆಲಸಕ್ಕೆ ಸೇರಿರುವ ನೇಮಕಾತಿ ಪತ್ರ ಕೊಡಬೇಕು.
-ಚಾಲಕರಿಗೆ ಕ್ಯಾಂಟೀನ್ ವ್ಯವಸ್ಥೆ ಅಥವಾ ಡ್ರೈವರ್ ಭತ್ಯೆ ಕೊಡಬೇಕು.
-ಮಾಸಿಕ ಪಾಸು (KSRTC BMTC) ಸೌಲಭ್ಯ ಒದಗಿಸಬೇಕು.
-ಪ್ರತಿ ತಿಂಗಳು 5 ರಿಂದ 8 ನೇ ತಾರೀಖಿನ ಒಳಗೆ ಸಂಬಳವನ್ನ ಖಾತೆಗೆ ಜಮಾ ಮಾಡಬೇಕು.
– ತಿಂಗಳ ವೇತನವನ್ನು 25000ರಿಂದ 30000 ರೂ.ಗಳಿಗೆ ಹೆಚ್ಚಿಸಬೇಕು.
-ಉತ್ತಮ ಗುಣಮಟ್ಟದ ಸಮವಸ್ತ್ರ ಹಾಗೂ ಶೂ ನೀಡಬೇಕು.
-ಚಾಲಕರ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು.
– ಚಾಲಕರಿಗೆ ಮಾಸಿಕ ರಜಾ ಸೌಲಭ್ಯ( CL, EL) ನೀಡಬೇಕು.
-ಚಾಲಕರಿಗೆ ಅಪಘಾತ ವಿಮೆ ನೀಡಬೇಕು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಪರಮ ಸ್ವಾಭಿಮಾನಿ: ಲತಾ ಮಂಗೇಷ್ಕರನ್ನು ಧಿಕ್ಕರಿಸಿಯೂ ಮೆರೆದ ಸ್ಟಾರ್ ಸಂಗೀತ ನಿರ್ದೇಶಕ ಓ.ಪಿ. ನಯ್ಯರ್