ಕಲಬುರಗಿ/ತುಮಕೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಹಾಗೂ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡ (Electric Shock) ಸಂಭವಿಸಿದೆ. ಪ್ರತ್ಯೇಕ ಕಡೆ ನಡೆದ ಈ ಅವಘಡದಲ್ಲಿ ದಂಪತಿ ಮೃತಪಟ್ಟರೆ, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ವಿದ್ಯುತ್ ತಂತಿ ತಗುಲಿ ದಂಪತಿ ಸಾವು
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದ ದುರ್ಘಟನೆಯಲ್ಲಿ ತಾರಾಬಾಯಿ ರಾಠೋಡ (26) ಶಿವು ರಾಠೋಡ (30) ದಂಪತಿ ಮೃತಪಟ್ಟಿದ್ದಾರೆ. ಇವರು ಯಾದಗಿರಿ ಜಿಲ್ಲೆಯ ಏವೂರ ತಾಂಡಾ ನಿವಾಸಿಗಳು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮಾತು ತಪ್ಪಿದ ಆಹಾರ ಇಲಾಖೆ; BPL, APL ಕಾರ್ಡ್ ಸಿಗೋದು ಯಾವಾಗ? ‘ಗ್ಯಾರಂಟಿ’ಯೇ ಇಲ್ಲ!
ಚಿತ್ತಾಪುರದಲ್ಲಿ ಹಜರತ್ ಚಿತಾಶಹಾವಲಿ ದರ್ಗಾದ ಕಾರ್ಯಕ್ರಮಕ್ಕೆ ಈ ದಂಪತಿ ಆಗಮಿಸಿದ್ದರು. ವಿದ್ಯುತ್ ಕಂಬದ ಆಸರೆಗೆಂದು ನೆಲದಲ್ಲಿ ಹೂತ್ತಿದ್ದ ತಂತಿಗೆ ವಿದ್ಯುತ್ ವ್ಯಾಪಿಸಿದೆ. ವಿದ್ಯುತ್ ತಂತಿ ಹೂತಿದ್ದ ಜಾಗದಲ್ಲೇ ನೀರು ನಿಂತಿತ್ತು. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಈ ವಿಷಯ ಗೊತ್ತಾಗದೇ ಈ ದಂಪತಿ ನೀರಿನಲ್ಲಿ ಕಾಲಿಟ್ಟಿದ್ದು, ಜೀವ ಬಿಟ್ಟಿದ್ದಾರೆ.
ಮೊದಲಿಗೆ ಪತ್ನಿ ತಾರಾಬಾಯಿ ವಿದ್ಯುತ್ ಸ್ಪರ್ಶಿಸಿದ ಹಿನ್ನೆಲೆ ನೆಲಕ್ಕುರುಳಿ ಬಿದ್ದಿದ್ದರು. ಅವರಿಗೆ ಏನಾಗುತ್ತಿದೆ ಎಂದು ಗೊತ್ತಾಗದ ಪತಿ ಕೂಡ ಆಕೆಯನ್ನು ರಕ್ಷಣೆ ಮಾಡಲು ಹೋಗಿದ್ದು, ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ರಕ್ಷಣೆಗೆ ಹೋಗಿದ್ದ ಇನ್ನಿಬ್ಬರಿಗೂ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದರ್ಗಾದ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವಾಗ ಘಟನೆ ಸಂಭವಿಸಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರಟಗೆರೆಯಲಿ ವಿದ್ಯುತ್ ಶಾಕ್‌ನಿಂದ ನಾಲ್ವರು ಆಸ್ಪತ್ರೆಗೆ ದಾಖಲು
ತುಮಕೂರು: ಕೊರಟಗೆರೆ ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿನ 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿಯೊಂದು ತುಂಡಾದ ಪರಿಣಾಮ ಅನಾಹುತವಾಗಿದೆ.
ಇದಲ್ಲದೆ, ಗ್ರಾಮದ 70 ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಭಸ್ಮ.ವಾಗಿವೆ. ನೂರಾರು ಮನೆಗಳ ವೈರಿಂಗ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು, ವಿದ್ಯುತ್ ಮೀಟರ್‌ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಬೆಲೆಯ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದು, ಮನೆಯ ಒಳಗೆ ಇರಲು ಜನರು ಭಯ ಪಡುತ್ತಿದ್ದಾರೆ.
ತಾಯಿ ಶಾರದಮ್ಮ (55), ಮಗ ಮಂಜುನಾಥ್ (35), ಸೊಸೆ ವರಲಕ್ಷ್ಮಿ (30), ಮೊಮ್ಮಗ ದರ್ಶನ್ (12 )ವಿದ್ಯುತ್ ಶಾಕ್‌ಗೆ ತುತ್ತಾದವರು. ಪ್ರಾಣಾಪಾಯದಿಂದ ಪಾರಾದ ನಾಲ್ವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್‌ಪಿ, ಕೊರಟಗೆರೆ ತಹಸೀಲ್ದಾರ್, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Rain News: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್; ಸಮುದ್ರ ಪಾಲಾದ ಮನೆಗಳು, ಇನ್ನೂ 5 ದಿನ ಭಾರಿ ಮಳೆ
ವಿದ್ಯುತ್ ತಂತಿ ದುರಸ್ತಿಗೆ ಕ್ರಮ
ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳಿಗೆ ಶೀಘ್ರ ಪರಿಹಾರ ನೀಡುವುದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತಹಸೀಲ್ದಾರ್ ಮುನಿಶಾಮಿ ರೆಡ್ಡಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ನಾಲ್ವರ ಆರೋಗ್ಯವನ್ನು ವಿಚಾರಿಸಿದ್ದಾರೆ.