Site icon Vistara News

Electricity Bill | ಕೋಟ್ಯಂತರ ರೂ. ವಿದ್ಯುತ್‌ ಶುಲ್ಕ ಬಾಕಿ; ಜಲಮಂಡಳಿ, ಬಿಬಿಎಂಪಿಗೆ ಬೆಸ್ಕಾಂ ನೋಟಿಸ್‌

Bescom

ಬೆಂಗಳೂರು: ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡ ಸರ್ಕಾರಿ ಸಂಸ್ಥೆಗಳಿಗೆ ಬೆಸ್ಕಾಂ ನೋಟಿಸ್‌ ಜಾರಿ ಮಾಡಿದೆ. ಬೆಸ್ಕಾಂನ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್‌ ಫೀಲ್ಡ್‌ ವಿಭಾಗಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬಿಬಿಎಂಪಿ ಸೇರಿ ಮತ್ತಿತರ ಸರಕಾರಿ ಕಚೇರಿಗಳು 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿವೆ.

ಬೆಸ್ಕಾಂನ ಶಿವಾಜಿ ನಗರ ವಿಭಾಗ ವ್ಯಾಪ್ತಿಗೆ ಬರುವ ಪಿಳ್ಳಣ್ಣ‌ ಗಾರ್ಡನ್, ಬಂಬೂ ಬಜಾರ್‌, ಕಾಕ್ಸ್‌ ಟೌನ್‌, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ ‌ ಜಲ ಮಂಡಳಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ 27.54 ಕೋಟಿ ರೂ ಮತ್ತು 90.20 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ಬಾಕಿ ಪಾವತಿಸಲು ಸೂಚಿಸಿ ಶಿವಾಜಿನಗರ ಕಾರ್ಯನಿರ್ವಾಹಕ ಎಂಜಿನಿಯರ್‌ ಎರಡೂ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

ಬೆಸ್ಕಾಂನ ಕೋರಮಂಗಲ ವಿಭಾಗದ ಆಸ್ಟಿನ್‌ ಟೌನ್‌, ಕೋರಮಂಗಲ, ಮುರುಗೇಶ್‌ ಪಾಳ್ಯ, ಮಡಿವಾಳ, ಎಚ್ಎಎಲ್‌ ಉಪ ವಿಭಾಗಳ ವ್ಯಾಪ್ತಿಗೆ ಒಳಪಡುವ 10 ವಾರ್ಡ್‌ಗಳಿಂದ ಜಲಮಂಡಳಿಯು 23.71 ಕೋಟಿ ರೂ. ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿದ್ದು, 19 ವಾರ್ಡ್‌ಗಳಿಂದ ಬಿಬಿಎಂಪಿ ಸುಮಾರು 22.20 ಕೋಟಿ ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ.

ಮಲ್ಲೇಶ್ವರಂ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಉಪ ವಿಭಾಗಗಳಿಗೆ ಜಲಮಂಡಳಿ ಮತ್ತು ಬಿಬಿಎಂಪಿ ಕ್ರಮವಾಗಿ 13.60 ಕೋಟಿ ರೂ. ಮತ್ತು 16.70 ಕೋಟಿ ರೂ.ಗಳನ್ನು ಬೆಸ್ಕಾಂಗೆ ಪಾವತಿಸಬೇಕಾಗಿದೆ. ಮಲ್ಲೇಶ್ವರಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎರಡೂ ಸಂಸ್ಥೆಗಳಿಗೆ ಬಿಲ್‌ ಪಾವತಿಸಲು ನೋಟಿಸ್‌ ಜಾರಿಗೊಳಿಸಿದ್ದಾರೆ.

ಪೋಸ್ಟ್‌ ಆಫೀಸ್‌, ತೋಟಗಾರಿಕೆ ಇಲಾಖೆಗೂ ನೋಟಿಸ್‌
ಇಂದಿರಾನಗರ ವಿಭಾಗದ ಕಬ್ಬನ್‌ ಪಾರ್ಕ್‌, ವಸತಿ ಇಲಾಖೆ ಮ್ಯೂಸಿಯಂ, ತೋಟಗಾರಿಕೆ ಇಲಾಖೆ, ಪೋಸ್ಟ್‌ ಆಫೀಸ್‌ ಸೇರಿ ನ್ಯಾಷನಲ್‌ ಏರೋನಾಟಿಕ್ಸ್‌ ಲಿಮಿಟೆಡ್‌, ಎಲ್‌ಐ.ಸಿ, ಬಿಎಸ್ಎನ್ಎಲ್‌, ಬಿಡಿಎ. ಬಿಎಂಆರ್‌ಸಿ. ಎಲ್‌ಡಿಆರ್‌ಡಿಓ, ಹೈಕೋರ್ಟ್‌ ವಸತಿಗೃಹ ಮುಂತಾದ ಸರಕಾರಿ ಕಚೇರಿಗಳು ಒಟ್ಟು 36.25 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿದೆ ಎಂದು ಇಂದಿರಾ ನಗರ ಕಾರ್ಯನಿರ್ವಾಹಕ ಎಂಜಿನಿಯರ್‌ ನೀಡಿರುವ ನೋಟಿಸ್‌ನಲ್ಲಿ ವಿವರಿಸಲಾಗಿದೆ. ವೈಟ್‌ ಫೀಲ್ಡ್‌ ವಿಭಾಗದ ಒಟ್ಟು 5.81 ಕೋಟಿ ರೂ. ವಿದ್ಯುತ್‌ ಶುಲ್ಕ ಬಾಕಿ ಇದೆ. ವಿದ್ಯುತ್‌ ಬಿಲ್‌ ವಸೂಲಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Bescom | 3 ತಿಂಗಳು ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ಪರ್ಮನೆಂಟ್‌ ಪವರ್ ಕಟ್‌: ಬೆಸ್ಕಾಂನಿಂದ ಹೊಸ ಅಸ್ತ್ರ, ಗ್ರಾಹಕರಿಗೆ ಶಾಕ್‌

Exit mobile version