ಕೊಡಗು : ಕೊಡುಗು ಹಾಗೂ ಹಾಸನ ಜಿಲ್ಲೆಯಲ್ಲಿ ಆನೆ ಮತ್ತು ಮಾನವನ ಸಂಘರ್ಷ ಮುಂದುವರಿದಿದೆ. ಜಿಲ್ಲೆಯಲ್ಲಿ ಆನೆ ದಾಳಿಯಿಂದ ಜನರು ಜೀವ ಕಳೆದುಕೊಳ್ಳುತ್ತಲೇ ಇದ್ದಾರೆ. ಆನೆ ಮತ್ತು ಮಾನವ ಸಂಘರ್ಷಕ್ಕೆ ಕೊನೆಗಾಣಿಸುವಂತೆ ಹಾಗೂ ಆನೆಗಳನ್ನು ಕಾಡಿಗೆ ಓಡಿಸುವಂತೆ ಅರಣ್ಯ ಇಲಾಖೆಗೆ ರೈತ ಸಂಘ ಒತ್ತಾಯಿಸಿದೆ.
ದಕ್ಷಿಣ ಕೊಡಗಿನಲ್ಲಿಯೂ ಆನೆ ಹಾವಳಿ ಹೆಚ್ಚಾಗಿದ್ದು, ಮನುಷ್ಯನನ್ನು ಬಲಿ ಪಡೆದುಕೊಳ್ಳುತ್ತಲೆ ಇದೆ. ಶುಕ್ರವಾರ (ಜೂನ್ 10) ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಎಂಬಲ್ಲಿ ತೋಟಕ್ಕೆ ಹೋಗುವ ಸಂದರ್ಭದಲ್ಲಿ 58 ವರ್ಷದ ಹಾಲಪ್ಪ ಎಂಬುವವರ ಮೇಲೆ ಆನೆ ದಾಳಿ ನಡೆಸಿದೆ. ಅದೃಷ್ಟವಶಾತ್ ಹಾಲಪ್ಪ ಪ್ರಾಣಪಾಯದಿಂದ ಪಾರಾಗಿದ್ದು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಒಂದು ಘಟನೆ ಮಾಸುವ ಮೊದಲೇ ಶನಿವಾರ (ಜೂನ್ 11 ) ಬೆಳಗ್ಗೆ ಆನೆ ದಾಳಿಯಾಗಿದ್ದು ಓರ್ವ ಬಲಿಯಾಗಿದ್ದಾರೆ. ಜಿಲ್ಲೆಯ ಗೋಣಿಕೊಪ್ಪ ಸಮೀಪದ ದನುಗಾಲ ಮಾರಮ್ಮ ಕಾಲೋನಿ ನಿವಾಸಿ 50 ವರ್ಷ ಪ್ರಾಯದ ಚಾಮ ಎಂಬುವರ ಮೆಲೆ ಕಾಡಾನೆ ದಾಳಿ ನಡೆಸಿದ್ದು ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ | ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಆನೆ ಸಾವಿಗೆ ಗುಂಡೇಟು ಕಾರಣ
ಇನ್ನೊಂದು ಪ್ರಕರಣದಲ್ಲಿ ಕೋಣನ ಕಟ್ಟೆಯಿಂದ ಮೂವರು ಯುವಕರು ಮರಪಾಲ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುವಾಗ ಪಕ್ಕದ ಕಾಫಿ ತೋಟದಿಂದ ಬಂದ ಕಾಡಾನೆ ಬೈಕ್ ಸವಾರರ ಮೇಲೆ ದಾಳಿ ಮಾಡಿದೆ. ಮುಂಜಾನೆ ಹೊತ್ತಿನಲ್ಲಿ ದೇವಸ್ಥಾನಕ್ಕೆ ತೆರಳಿ ವಾಪಸ್ಸು ಬರುತ್ತಿದ್ದ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ಮೂವರಲ್ಲಿ ಒಬ್ಬನನ್ನು ಆನೆ ದಾಳಿಮಾಡಿ ಕೆಳಗೆ ಬೀಳಿಸಿ ತುಳಿದು ಸಾಯುಸಿದ್ದರೆ, ಇಬ್ಬರು ಯುವಕರು ಬೈಕ್ ನಲ್ಲಿ ಮುಂದೆಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ರೈತ ಸಂಘಟನೆಯ ಪ್ರಮುಖರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ದಕ್ಷಿಣ ಕೊಡಗಿನಲ್ಲಿ ಕಾಡಾನೆ ಸೇರಿದಂತೆ ಕಾಡುಪಾಣಿಗಳ ಉಪಟಳ ಮಿತಿ ಮೀರಿದ್ದು ಸೂಕ್ತ ರೀತಿಯಲ್ಲಿ ಕ್ರಮ ವಹಿಸುವಂತೆ ಆಗ್ರಹಿಸಿದರು. ಗೋಣಿಕೊಪ್ಪ ಪೊನ್ನಂಪೇಟೆ ಸುತ್ತಮುತ್ತಲಿನ ತೋಟಗಳಲ್ಲಿ ಸಾಕಷ್ಟು ಕಾಡಾನೆಗಳು ಬೀಡು ಬಿಟ್ಟಿದ್ದು ಅವುಗಳನ್ನ ಶೀಘ್ರವಾಗಿ ಕಾಡಿಗೆ ಓಡಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ಈ ಕುರಿತು ಮಾತನಾಡಿದ ರೈತ ಸಂಘಟನೆಯ ಮನು ಸೋಮಯ್ಯ, ಕಾಡಾನೆಗಳು ಕಾಡಿನಲ್ಲಿ ಇರುವುದಕ್ಕಿಂತ ಕಾಫಿತೋಟದಲ್ಲಿ ಬೀಡುಬಿಟ್ಟಿದ್ದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಗೋಣಿಕೊಪ್ಪ ಭಾಗದ ಕೆಲವೊಂದು ಪ್ರದೇಶಗಳಲ್ಲಿ ಇನ್ನೂ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕೆಲಸಗಳು ಇನ್ನೂ ಮುಗಿದಿಲ್ಲ. ಅದನ್ನು ಶೀಘ್ರವಾಗಿ ಮುಗಿಸಿ ಆನೆದಾಳಿಯಿಂದ ಈ ಭಾಗದ ಜನತೆಯನ್ನು ರಕ್ಷಿಸುವಂತೆ ಒತ್ತಾಯಿಸಿದ್ದಾರೆ.
ಹಾಸನದಲ್ಲೂ ತೊಂದರೆ
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಗ್ರಾಮಗಳಲ್ಲೂ ಗಜಪಡೆಗಳ ನಿರಂತರ ಗಲಾಟೆಯಿಂದ ರೈತರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಡ್ರಂನಲ್ಲಿರುವ ನೀರು ಕುಡಿಯುವುದಲ್ಲದೇ ದಾರಿಯಲ್ಲಿ ಸಿಗುವ ಅಕ್ಕಪಕ್ಕದ ಮನೆಗಳ ಬಳಿಯೂ ಆನೆಗಳು ಸಾಗಿ ಹೋಗುತ್ತಿವೆ. ಹಗಲು ರಾತ್ರಿ ಎನ್ನದೇ ಕಾಡಾನೆಗಳ ಓಡಾಟ ನಡೆಸುತ್ತಿವೆ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಕಾಡಾನೆಗಳು ನಿತ್ಯವೂ ಸಂಚಾರ ಮಾಡುತ್ತಿವೆ.
ಸಕಲೇಶಪುರ ತಾಲೂಕಿನ ಹಾಲೇ ಬೇಲೂರು ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಸಂಚರಿಸುತ್ತಿದ್ದು, ಕಾಡಾನೆ ಓಡಾಟದ ವಿಡಿಯೊ ಮಾಡಲು ಕಾಫಿ ತೋಟದಲ್ಲಿ ಸ್ಥಳಿಯರು ಮೊಬೈಲ್ ಇಟ್ಟಿದ್ದರು. ಅದರಲ್ಲಿ ಆನೆಯ ಆಗಮನದ ದೃಶ್ಯ ಇತ್ತೀಚೆಗೆ ಸೆರೆಯಾಗಿತ್ತು. ಈ ವಿಡಿಯೋ ನೋಡಲು ಸುಂದರವಾಗಿದೆಯಾದರೂ, ಅದೇ ಆನೆ ದಾಳಿ ಮಾಡುವುದು ಅಷ್ಟೇ ಭಯಾನಕವಾಗಿರುತ್ತದೆ.
ಇದನ್ನೂ ಓದಿ | ತೋಟದಲ್ಲಿ ʼಸೆರೆʼ ಹಿಡಿಯಲೆಂದು ಇಟ್ಟ ಮೊಬೈಲ್‌ಗೆ ಮುತ್ತಿಟ್ಟು ಹೋದ ಒಂಟಿ ಸಲಗ!