ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲೂಕಿನ ತಳವಾರ, ದೊಡ್ಡ ಹಳ್ಳ ಕುಂದೂರು ಭಾಗದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯು ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಡ್ರೋನ್ ಕ್ಯಾಮೆರಾಗೂ ಚಳ್ಳೆಹಣ್ಣು ತಿನಿಸಿಸುತ್ತಿರುವ ಕಾಡಾನೆ ಬೈರ ಮತ್ತು ಅದರ ಸ್ನೇಹಿತರಿಗಾಗಿ ಹುಡುಕಾಟ (Elephant Attack) ತೀವ್ರಗೊಂಡಿದೆ.
ದಸರಾ ಅಂಬಾರಿ ಹೊರುವ ಅಭಿಮನ್ಯು ಸೇರಿ 5 ಸಾಕಾನೆಗಳ ಮೂಲಕ ಆಪರೇಷನ್ ಬೈರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡಾನೆ ಸೆರೆಗೆ ಹರಸಾಹಸಪಡುತ್ತಿದ್ದು, ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೂರು ಪುಂಡ ಆನೆಗಳ ಪೈಕಿ ಒಂದನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಇಷ್ಟು ದಿನ ಕಾಫಿ ತೋಟಗಳಲ್ಲಿ ಓಡಾಡಿಕೊಂಡು ಬೆಳೆ ನಾಶ ಮಾಡುತ್ತಿದ್ದ ಬೈರ ಹೆಸರಿನ ಪುಂಡಾನೆಯು ಈಗ ದಿಢೀರ್ ನಾಪತ್ತೆ ಆಗಿದೆ. ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿಯೂ ಅದನ್ನು ಹುಡುಕಲು ಡ್ರೋನ್ ಕ್ಯಾಮೆರಾದ ಮೊರೆ ಹೋಗಲಾಗಿದೆ.
ಮೂವರನ್ನು ಬಲಿ ಪಡೆದಿರುವ ಪುಂಡಾನೆ
ಕಳೆದ ಮೂರು ತಿಂಗಳಲ್ಲಿ ಮೂರು ಮಂದಿಯನ್ನು ಕಾಡಾನೆಗಳು ಬಲಿ ಪಡೆದಿದ್ದವು. ಹೀಗಾಗಿ ಮೂಡಿಗೆರೆಯಲ್ಲಿ ಕಾಡಾನೆ ಬೈರನನ್ನು ಸೆರೆಹಿಡಿಯುವ ಆಪರೇಷನ್ ಮತ್ತೆ ಶುರುವಾಗಿದೆ. ರಾಜ್ಯ ಸರ್ಕಾರದ ಆದೇಶದ ಬೆನ್ನಲ್ಲೇ ಕಾರ್ಯೋನ್ಮುಖವಾಗಿರುವ ಅರಣ್ಯ ಇಲಾಖೆಯು ಶತಾಯಗತಾಯ ಪುಂಡಾನೆ ಬೈರ ಸೇರಿದಂತೆ ಮತ್ತೆರಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ನಿರ್ಧರಿಸಿದೆ. ಪುಂಡಾನೆಗಳ ಸೆರೆಗೆ ಅಭಿಮನ್ಯು, ಮಹಾರಾಷ್ಟ್ರದ ಭೀಮ, ಕರ್ನಾಟಕದ ಭೀಮ, ಮಹೇಂದ್ರ, ಪ್ರಶಾಂತ್, ಅಜೇಯ ಹೆಸರಿನ ಆರು ಆನೆಗಳು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.
ಮೊದಲ ದಿನದ ಕಾರ್ಯಾಚರಣೆಯಲ್ಲಿ ಕುಂದೂರಿನ ಕೆಂಜಿಗೆ ಭಾಗದಲ್ಲಿ ಅರಿವಳಿಕೆ ಮದ್ದು ನೀಡಿ ಕಾಡಾನೆಯೊಂದನ್ನು ಸೆರೆ ಹಿಡಿಯಲಾಯಿತು. ಉಳಿದ ೨ ಕಾಡಾನೆಗಳನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇತ್ತ ಸೆರೆ ಹಿಡಿದ ಕಾಡಾನೆಯನ್ನು ದುಬಾರೆ ಆನೆಕ್ಯಾಂಪ್‌ಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ | Road accident | ಕಾರು ಮತ್ತು ಬಸ್‌ಗೆ ಬೈಕ್ ಡಿಕ್ಕಿ: ಇಬ್ಬರೂ ಸವಾರರು ಸ್ಥಳದಲ್ಲೇ ಮೃತ್ಯು