ಆನೇಕಲ್: ಹೊಸೂರು ಸಮೀಪ ಬೈಕ್ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಆನೆಗಳ ಹಿಂಡು ದಾಳಿ (Elephant Attack) ಮಾಡಿವೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕಿನಲ್ಲಿ ಬರುತ್ತಿದ್ದ ಏರಿಕೋಡಿ ಕೋಟಾಯ್ ಗ್ರಾಮದ ಅರುಳ್ ಕುಮಾರ್ ಎಂಬಾತ ಕಾಡಾನೆ ದಾಳಿಗೆ ಬಲಿಯಾಗಿದ್ದಾನೆ. ಹೊಸೂರು ಬಳಿಯ ವನಕೊಟ್ಟಂ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಡೆಂಕಣಿಕೋಟೆ ಹಾಗೂ ಹೊಸೂರು ಕಾಡಿನಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ನೊಗನೂರು ಗ್ರಾಮದ ಕಾಡಂಚಿನಲ್ಲಿ ಆನೆಗಳ ಹಿಂಡು ಆಗಾಗ ಪ್ರತ್ಯಕ್ಷವಾಗುತ್ತಿದೆ. ಇದರ ಅರಿವು ಇರದ ಅರುಳ್ ಕುಮಾರ್ ಬೈಕ್ನಲ್ಲಿ ಹೋಗುತ್ತಿದ್ದಾಗ ಕಾಡಾನೆಗಳ ಹಿಂಡು ಏಕಾಏಕಿ ರಸ್ತೆಗೆ ಬಂದಿದೆ. ಈ ವೇಳೆ ಕಾಡಾನೆಗಳಿಂದ ತಪ್ಪಿಸಿಕೊಳ್ಳಲು ಆಗದೆ ಅವುಗಳ ದಾಳಿಗೆ ತುತ್ತಾಗಿದ್ದಾನೆ. ಸಿಟ್ಟಿಗೆದ್ದ ಕಾಡಾನೆಗಳು ಬೈಕ್ ಅನ್ನು ತುಳಿದು ಪುಡಿ ಪುಡಿ ಮಾಡಿದೆ.
ಮೃತ ಅರುಳ್ ಕುಮಾರ್ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ. ಕಾಡಾನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು. ಕಾಡಾನೆ ಹಾವಳಿಯಿಂದ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಮಾತ್ರವಲ್ಲದೆ ಜನರ ಮೇಲೆ ಎರಗಿ ದಾಳಿ ಮಾಡುತ್ತಿವೆ ಎಂದು ಕಿಡಿಕಾರಿದರು.
ಘಟಿಕೋತ್ಸವಕ್ಕೆ ಬಂದಿದ್ದ ವಿದ್ಯಾರ್ಥಿಗೆ ಕಚ್ಚಿದ ಹಾವು
ತುಮಕೂರು: ಒಂದೇ ವಾರದಲ್ಲಿ ಹಾವು ಕಡಿತದಿಂದ (Snake Bite) ಮೂವರು ಮೃತಪಟ್ಟಿದ್ದಾರೆ. ಘಟಿಕೋತ್ಸವದಲ್ಲಿ ಪದವಿ ಪಡೆದ ಕೇರಳ ಮೂಲದ ವಿದ್ಯಾರ್ಥಿಗೆ ಹಾವು ಕಡಿದು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ನಿನ್ನೆ ಬುಧವಾರ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಘಟಿಕೋತ್ಸವ ನಡೆದಿತ್ತು. ಇದರಲ್ಲಿ ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಎಂಬಿಬಿಎಸ್ ಪದವಿ ಪಡೆದಿದ್ದ. ಪದವಿ ಪಡೆದು ಪಾರ್ಕಿನಲ್ಲಿ ನಿಂತಿದ್ದವನಿಗೆ ಹಾವು ಕಡಿದಿರುವ ಶಂಕೆ ವ್ಯಕ್ತವಾಗಿದೆ.
ಹಾವು ಕಡಿತ ಗಮನಿಸದೇ ಮನೆಗೆ ಬಂದಾಗ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಮೃತದೇಹವನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ