ಬೆಂಗಳೂರು/ಶಿವಮೊಗ್ಗ: ಆನೆ ದಾಳಿಗೆ (Elephant Attack) ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಕ್ರೆಬೈಲು (Sakrebailu) ಆನೆ ಬಿಡಾರದ ಹಿರಿಯ ವೈದ್ಯಾಧಿಕಾರಿ ಡಾ. ವಿನಯ್ (Dr.Vinay) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಕಾಡಾನೆಗೆ ಅರಿವಳಿಕೆ ಔಷಧವನ್ನು ನೀಡಲು ಹತ್ತಿರ ಹೋದಾಗ ಸೊಂಡಿಲಿಂದ ಡಾ.ವಿನಯ್ ಮುಖಕ್ಕೆ ಬಡಿದಿತ್ತು. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸದ್ಯ ವಿನಯ್ ಸ್ಥಿತಿ ಗಂಭೀರವಾಗಿ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜೀರೋ ಟ್ರಾಫಿಕ್‌ನಲ್ಲಿ ಎರಡು ಆಂಬ್ಯುನೆಲ್ಸ್ ಮೂಲಕ ಕರೆತರಲಾಗಿದೆ. ಡಾ.ವಿನಯ್ ಜತೆ ಕುಟುಂಬಸ್ಥರು ಪ್ರಯಾಣ ಬೆಳೆಸಿದ್ದಾರೆ.
ಏನಿದು ಘಟನೆ?
ದಾವಣಗೆರೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಬಾಲಕಿಯೊಬ್ಬಳನ್ನು ಕಾಡಾನೆಯೊಂದು ಕೊಂದು ಹಾಕಿತ್ತು. ಆನೆಯನ್ನು (Elephant attack) ಸೆರೆ ಹಿಡಿಯಲು ಅರಣ್ಯ ಇಲಾಖೆ ಶತಪ್ರಯತ್ನ ನಡೆಸಿತ್ತು. ಈ ನಡುವೆ ಅರಿವಳಿಕೆ ಔಷಧ ನೀಡಲು ಹತ್ತಿರ ಹೋದ ವೈದ್ಯರನ್ನೇ ಆನೆಯು ಸೊಂಡಿಲಿನಿಂದ ಎತ್ತಿ ಎಸೆದಿತ್ತು. ಕಳೆದ ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕಳೆದ ಮಂಗಳವಾರ (ಏ.11) ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದ ಬಳಿ ಪುಂಡ ಕಾಡಾನೆಯನ್ನು (Operation Elephant) ಸೆರೆ ಹಿಡಿಯಲಾಗಿತ್ತು.
ಏ.8ರಂದು ದಾವಣಗೆರೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಪುಂಡಾನೆಯ ದಾಂಧಲೆಗೆ ಕವನ (17) ಎಂಬ ಬಾಲಕಿ ಬಲಿಯಾಗಿದ್ದಳು. ಜಮೀನಿನಲ್ಲಿ ಅವರೆಕಾಯಿ ಬಿಡಿಸುತ್ತಿದ್ದಾಗ ಕಾಡಾನೆಯು ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಳು. ಇತ್ತ ಕವನಾಳ ತಾಯಿ ಮಂಜುಳಾ ಸೇರಿ ಐವರು ಗಾಯಗೊಂಡಿದ್ದರು. ಈ ಘಟನೆ ಬೆನ್ನಲ್ಲೇ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಪುಂಡಾನೆಯನ್ನು ಸೆರೆ ಹಿಡಿದು ಕಾಡಿಗೆ ಬಿಡುವಂತೆ ಸ್ಥಳೀಯರು ಒತ್ತಾಯಿಸಿದ್ದರು.
ಹೀಗಾಗಿ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು ಆ ದಿನವೇ ಸಕ್ರೆಬೈಲು ಆನೆ ಬಿಡಾರದಿಂದ ಸಾಗರ, ಬಾಲಣ್ಣ, ಹಾಗೂ ಬಹದ್ದೂರ್ ಜತೆಗೆ ಇನ್ನೊಂದೆಡೆ ನಾಗರಹೊಳೆಯಿಂದ ಅಭಿಮನ್ಯು, ಭೀಮ ಮತ್ತು ಮಹೇಂದ್ರ ಎಂಬ ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕೈಗೆ ಸಿಗದೆ ಕಣ್ತಪ್ಪಿಸಿ ಪುಂಡಾನೆ ಓಡಾಡುತ್ತಿತ್ತು.
ಚನ್ನಗಿರಿಯ ಸೂಳೆಕೆರೆಯಲ್ಲಿ ಹುಡುಕಾಟ ನಡೆಸುವಾಗಲೇ ಅಲ್ಲಿಂದ ತಪ್ಪಿಸಿಕೊಂಡು ನ್ಯಾಮತಿ ಪ್ರದೇಶಕ್ಕೆ ಹೆಜ್ಜೆ ಹಾಕಿತ್ತು. ಚನ್ನಗಿರಿ ತಾಲೂಕಿನ ಸೂಳೆಕೆರೆ ಅರಣ್ಯ ಪ್ರದೇಶದ ಸುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಯ ಹುಟ್ಟಿಸಿದ್ದ ಈ ಕಾಡಾನೆಯು ನೋಡಲು ಸಣ್ಣಗೆ ಕಂಡರೂ ಪುಂಡಾಟ ಮಾತ್ರ ದೊಡ್ಡದಾಗಿತ್ತು.
ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಕಾಡಾನೆಯು, ಮಂಗಳವಾರ ಮುಂಜಾನೆ (ಏ.11) ಜೀನಹಳ್ಳಿಯಲ್ಲಿ ಪತ್ತೆಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಕೂಡಲೇ ಸಕ್ರೆಬೈಲು ಆನೆ ಬಿಡಾರದ ಹಿರಿಯ ವೈದ್ಯಾಧಿಕಾರಿ ಡಾ. ವಿನಯ್ ಅವರು ಸಿಬ್ಬಂದಿ ಸಮೇತವಾಗಿ ಅಲ್ಲಿಗೆ ಧಾವಿಸಿದ್ದರು.
ದೂರದಿಂದಲೇ ಅರಿವಳಿಕೆ ಔಷಧವನ್ನು ಆನೆಗೆ ಹೊಡೆದಿದ್ದರು. ಸಾಮಾನ್ಯವಾಗಿ ಒಂದೆರಡು ಸುತ್ತಿನ ಅರಿವಳಿಕೆ ಔಷಧದಲ್ಲಿ ಆನೆ ಪ್ರಜ್ಞೆ ತಪ್ಪಿ ಬೀಳುತ್ತಿತ್ತು. ಆದರೆ, ಈ ಕಾಡಾನೆಗೆ ಅರಿವಳಿಕೆ ಔಷಧ ನೀಡಿದ್ದರೂ ಹಾಗೆ ನಿಂತಿತ್ತು. ಹೀಗಾಗಿ ಅದರ ಹತ್ತಿರಕ್ಕೆ ಹೋಗಿ ಇನ್ನೊಂದು ಡೋಸ್ ಔಷಧ ನೀಡಲು ಡಾ. ವಿನಯ್ ಮುಂದಾಗಿದ್ದರು.
ಆನೆ ಶಕ್ತಿ ಕಳೆದುಕೊಂಡಿದೆ ಎಂದು ಭಾವಿಸಿದ ಡಾ. ವಿನಯ್ ಇನ್ನೊಂದು ಸುತ್ತು ಅರಿವಳಿಕೆ ಕೊಡಲು ಮುಂದಾಗುತ್ತಿದ್ದಂತೆಯೇ ಸಿಟ್ಟಿಗೆದ್ದ ಆನೆ ಸೊಂಡಿಲಿನಿಂದ ಅವರಿಗೆ ಬಡಿದಿತ್ತು. ಗಾಯಗೊಂಡ ವೈದ್ಯ ವಿನಯ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ರವಾನಿಸಲಾಗಿದೆ.