ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ಇಟಿಎಫ್ ಸಿಬ್ಬಂದಿಯನ್ನು ಒಂಟಿ ಸಲಗವೊಂದು (Elephant Attack) ಹಿಮ್ಮೆಟ್ಟಿಸಿದೆ. ಇಟಿಎಫ್ ಸಿಬ್ಬಂದಿ ಕಾಡಾನೆಯನ್ನು ಟ್ರ್ಯಾಕ್ ಮಾಡುತ್ತಿದ್ದರು. ಈ ವೇಳೆ ಕಾಡಾನೆ ಕಾರ್ಯಪಡೆ ಸಿಬ್ಬಂದಿಯನ್ನು ಕರಡಿ ಹೆಸರಿನ ಒಂಟಿಸಲಗ ಅಟ್ಟಾಡಿಸಿದೆ.
ಇಟಿಎಫ್ ಸಿಬ್ಬಂದಿ ಸ್ಕೂಟಿಯನ್ನು ಬಿಟ್ಟು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಕೆಲಕಾಲ ಕಾಫಿ ಗಿಡದ ಮರೆಯಲ್ಲಿ ನಿಂತು ಅತ್ತಿಂದಿತ್ತ ಓಡಾಡಿದೆ. ಇದೆಲ್ಲವನ್ನೂ ಮತ್ತೊಬ್ಬ ಸಿಬ್ಬಂದಿ ಮರದ ಮೇಲೆ ಕುಳಿತು ಕಾಡಾನೆಯ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಸೀಗೆ ಹೆಸರಿನ ಕಾಡಾನೆ ಸೆರೆಗೆ ಸಿದ್ಧತೆ
ಮತ್ತೊಂದೆಡೆ ಸೀಗೆ ಹೆಸರಿನ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆಯನ್ನು ಮಾಡಿಕೊಂಡಿದೆ. ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು ದಾಳಿ ಮಾಡಿ ಕೊಂದಿತ್ತು.
ಆನೆಯ ಚಲನವಲನವನ್ನು ಆರ್ಆರ್ಟಿ ಹಾಗೂ ಇಟಿಎಫ್ ಸಿಬ್ಬಂದಿ ಗಮನಿಸುತ್ತಿದ್ದಾರೆ. ನಾಳೆ ಮಂಗಳವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆಯಲಿದೆ. ಪುಂಡಾನೆಗಳನ್ನು ಸೆರೆ ಹಿಡಿಯಲು ಇಟಿಎಫ್ ಟ್ರ್ಯಾಕ್ ಮಾಡುತ್ತಿದ್ದಾರೆ. ಕಳೆದ ಶನಿವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಭಾನುವಾರ ಮತ್ತು ಸೋಮವಾರ ಎರಡು ದಿನ ಬಿಡುವು ನೀಡಲಾಗಿದೆ.
ಇದನ್ನೂ ಓದಿ:Road Accident : ಕೊಳ್ಳೇಗಾಲದಲ್ಲಿ ಭತ್ತ ಕಟಾವು ಯಂತ್ರದ ಲಾರಿಗೆ ಬೈಕ್ ಡಿಕ್ಕಿ; ಭೀಕರ ಅಪಘಾತಕ್ಕೆ ನಾಲ್ವರು ಬಲಿ
ರಸ್ತೆ ದಾಟಿ ಕಾಡಿನೊಳಗೆ ಹೋದ ಕಾಡಾನೆಗಳ ಹಿಂಡು
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊತ್ತನಹಳ್ಳಿ ಬಳಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಕಾಫಿ ತೋಟದಿಂದ ರಸ್ತೆ ದಾಟಿ ಕಾಡಿನೊಳಗೆ ಆನೆಗಳು ಹೋಗಿವೆ. ಬೀಟಮ್ಮ ಹೆಸರಿನ ಕಾಡಾನೆಗಳ ಹಿಂಡಲ್ಲಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಆನೆಗಳಿವೆ. ಕಾಡಾನೆಗಳು ರಸ್ತೆ ದಾಟುವ ವಿಡಿಯೋವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಯಿಡಿದಿದ್ದಾರೆ.
ಕಾಡಾನೆಗಳ ಹಿಂಡಲ್ಲಿ ನಾಲ್ಕು ಸಲಗಗಳು ಹಾಗೂ ಮರಿಗಳೇ ಹೆಚ್ಚಾಗಿವೆ. ಕಳೆದ ಒಂದು ವಾರದಿಂದ ಮಾಳೇಗೆರೆ, ಕೊತ್ತನಹಳ್ಳಿ, ಜಗಬೋರನಹಳ್ಳಿ ಗ್ರಾಮಗಳ ಬಳಿ ಬೀಡುಬಿಟ್ಟಿವೆ. ಕಾಫಿ, ಬಾಳೆ, ಅಡಿಕೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶಪಡಿಸುತ್ತಿವೆ. ತೋಟಕ್ಕೆ ತೆರಳುವಾಗ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ