ಹಾಸನ/ಹೊಸೂರು: ರಾಜ್ಯದ ಹಲವು ಕಡೆ ಕಾಡಾನೆಗಳ ದಾಳಿ (Elephant Attack) ಹೆಚ್ಚುತ್ತಲಿದ್ದು, ಸಾವು-ನೋವುಗಳಿಗೆ ಕಾರಣವಾಗುತ್ತಿವೆ. ಸದ್ಯ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ನಾಟ್ರಾಪಲ್ಲಿ ಬಳಿ ನಡೆದಿದೆ.
ದನ ಮೇಯಿಸುತ್ತಿದ್ದ ದನಗಾಹಿ ಮೇಲೆ ಕಾಡಾನೆಗಳು ದಾಳಿ ಮಾಡಿದ್ದು ಜೀವಬಿಟ್ಟಿದ್ದಾನೆ. ಅಲ್ಲಿಂದ ಮುಂದೆ ಬಂದು ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆ ಮೇಲೂ ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ತಿಂಗಳ ಹಿಂದಷ್ಟೇ ತಮಿಳುನಾಡು ಆಂಧ್ರ ಗಡಿ ಭಾಗದಲ್ಲೂ ಕಾಡಾನೆಯು ನಾಲ್ವರ ಮೇಲೆ ದಾಳಿ ನಡೆಸಿತ್ತು. ಇದೀಗ ತಮಿಳುನಾಡು ಗಡಿಯಲ್ಲಿ ಕಾಡಾನೆಗೆ ಇಬ್ಬರು ಬಲಿಯಾಗಿದ್ದಾರೆ. ಕಾಡಾನೆಗಳ ಉಪಟಳಕ್ಕೆ ಗಡಿ ಗ್ರಾಮ ವಾಸಿಗಳ ಕಂಗಲಾಗಿದ್ದಾರೆ. ಸದ್ಯ ಚೆನ್ನೈ ಹೆದ್ದಾರಿ ಆಸುಪಾಸು ಕಾಡಾನೆಗಳು ಓಡಾಡುತ್ತಿದ್ದು, ಆ ಮಾರ್ಗವಾಗಿ ಸಾಗುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.
ಮಲೆನಾಡಲ್ಲಿ ಕಾಡಾನೆಗಳ ಉಪಟಳ
ಮಲೆನಾಡಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಹಾಸನದ ಸಕಲೇಶಪುರ ತಾಲೂಕಿನ ಗುಳಗಳಲೆ ಹಾಗೂ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗುಳಗಳಲೆ ಗ್ರಾಮದ ಕುರ್ಚಿ ಕಾಫಿ ಎಸ್ಟೇಟ್‌ನ ರೈಟರ್ ಇನಾಯತ್ (45) ಮೇಲೆ ಕಾಡಾನೆ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಇನಾಯತ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇತ್ತ ಹೆಬ್ಬನಹಳ್ಳಿ ಗ್ರಾಮದಲ್ಲಿ ಯುವಕನ ಮೇಲೆ ಒಂಟಿಸಲಗವೊಂದು ದಾಳಿ ನಡೆಸಿದೆ. ಅಸ್ಸಾಂ ಮೂಲದ ಕಾರ್ಮಿಕ ಹಬೀದ್ (26) ಮೇಲೆ ಸಲಗ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಹಬೀದ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Weather Report: ಕರಾವಳಿ, ಉತ್ತರ ಒಳನಾಡಿನಲ್ಲಿ ತಗ್ಗಿದ ಮಳೆ; ದಕ್ಷಿಣ ಒಳನಾಡಿನಲ್ಲಿ ಮುಂದುವರಿಯಲಿದೆ ಅಬ್ಬರ
ಅಂದಹಾಗೆ, ಬೀಟಮ್ಮ ಎಂಬ ಹೆಸರಿನ ಗುಂಪಿನಲ್ಲಿದ್ದ ಒಂಟಿಸಲಗವು ಬೇರ್ಪಟ್ಟು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿದೆ. ಇತ್ತ ಕಾಡಾನೆ ದಾಳಿ ಸುದ್ದಿ ಕೇಳಿ ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಎಚ್ಚರಿಕೆಯಿಂದ ಓಡಾಡುವಂತೆ ಮನವಿ ಮಾಡಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಮಲೆನಾಡು ಭಾಗದ ಜನರು ಆಗ್ರಹಿಸಿದ್ದಾರೆ.