ಕೊಡಗು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷವು ಮುಂದುವರಿದಿದೆ. ಆಹಾರವನ್ನು ಅರಸಿ ಬರುವ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಸದ್ಯ ಕೊಡಗಿನಲ್ಲಿ ಕಾಡಾನೆ ಹಾವಳಿ (Elephant attack )ಹೆಚ್ಚಾಗಿದೆ. ಕಾಜೂರು ಅರಣ್ಯ ಪ್ರದೇಶದಿಂದ ಬಂದ ಮದವೇರಿದ ಕಾಡಾನೆಯು ದಾಳಿ ಮಾಡಿದೆ. ಪ್ರಾಣಪಾಯದಿಂದ ಆರ್‌ಆರ್‌ಟಿ ಸಿಬ್ಬಂದಿ (RRT), ಅರಣ್ಯ ರಕ್ಷಕ ಪಾರಾಗಿದ್ದಾರೆ.
ಬೆಳಗ್ಗೆ ಕಾಡಾನೆಯು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್‌ನಲ್ಲಿತ್ತು. ಈ ಮಾಹಿತಿ ತಿಳಿದು ಸ್ಥಳಕ್ಕೆ ಆರ್‌ಆರ್‌ಟಿ ಮತ್ತು ಅರಣ್ಯ ಸಿಬ್ಬಂದಿ ತೆರಳಿದ್ದರು. ಈ ವೇಳೆ ಸಿಬ್ಬಂದಿಯನ್ನು ಕಂಡು ಆನೆಯು ದಾಳಿ ಮಾಡಿ, ಬೈಕ್ ಜಖಂಗೊಳಿಸಿದೆ. ನಂತರ ಎಸ್ಟೇಟ್‌ನಿಂದ ಅರಣ್ಯಕ್ಕೆ ವಾಪಸ್ ತೆರಳಿದೆ. ಅದೃಷ್ಟವಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆನೆ ಮದವೇರಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಕಾಡಾನೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: Elephant attack : ವೃದ್ಧೆಯ ಕಾಲು ಮುರಿದ ಆನೆ; ಕೆಟ್ಟು ನಿಂತ ಲಾರಿಯ ಟಾರ್ಪಲ್ ಕಿತ್ತೆಸೆದು ದಾಂಧಲೆ
ಹಾಸನದಲ್ಲಿ ಹೋಬಳಿ ಕೇಂದ್ರಕ್ಕೆ ನುಗ್ಗಿದ ಒಂಟಿಸಲಗ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ಒಂಟಿ ಸಲಗವೊಂದು ಹೋಬಳಿ ಕೇಂದ್ರಕ್ಕೆ ನುಗ್ಗಿದೆ. ತಡರಾತ್ರಿ ಗ್ರಾಮದೊಳಗೆ ಬಂದ ಕಾಡಾನೆ ಕಂಡು ಬೈಕ್‌ನಲ್ಲಿ ಬರುತ್ತಿದ್ದ ಸವಾರರು ಎದ್ದು ಬಿದ್ದು ಓಡಿದ್ದಾರೆ. ಇತ್ತ ನೈಟ್ ಬೀಟ್‌ನಲ್ಲಿದ್ದ ಪೊಲೀಸರು ಒಂಟಿಸಲಗವನ್ನು ಕಂಡು ಠಾಣೆಯೊಳಗೆ ಓಡಿ ಹೋಗಿದ್ದಾರೆ.
ಒಂಟಿಸಲಗವು ರಸ್ತೆ ಬದಿ ನಿಂತಿದ್ದ ವಾಹನಗಳನ್ನು ಬೀಳಿಸಿ ಹೋಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಯಸಳೂರು ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಕಾಡಾನೆ ಬೀಡುಬಿಟ್ಟಿದೆ. ಕಾಡಾನೆ ಇರುವ ಬಗ್ಗೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ