Site icon Vistara News

Elephant attack : ವೃದ್ಧೆಯ ಕಾಲು ಮುರಿದ ಆನೆ; ಕೆಟ್ಟು ನಿಂತ ಲಾರಿಯ ಟಾರ್ಪಲ್ ಕಿತ್ತೆಸೆದು ದಾಂಧಲೆ

Elephant attacks in Kodagu Chamarajanagar Hassan

ಕೊಡಗು/ಚಾಮರಾಜನಗರ: ಕೊಡಗಿನಲ್ಲಿ ಕಾಡಾನೆ ದಾಳಿ (Elephant attack) ಮುಂದುವರಿದಿದೆ. ಕೊಡಗಿನ ಕುಶಾಲನಗರ ತಾಲೂಕಿನ ಕಣಿವೆ ಸಮೀಪದ ಚಿನ್ನೇನಹಳ್ಳಿಯಲ್ಲಿ ಕಾಡಾನೆ ದಾಳಿಗೆ ವೃದ್ಧೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ. ಚಿನ್ನೇನಹಳ್ಳಿಯ ವೆಂಕಟಮ್ಮ ಆನೆ ದಾಳಿಗೆ ಒಳಗಾದವರು.

ವೆಂಕಟಮ್ಮ ಬಹಿರ್ದೆಸೆಗೆಂದು ತೆರಳಿದಾಗ ಸಲಗವೊಂದು ದಿಢೀರ್‌ ದಾಳಿ ನಡೆಸಿದೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ವೆಂಕಟಮ್ಮರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಚಾಮರಾಜನಗರದಲ್ಲಿ ಆನೆ ರಂಪಾಟ

ಚಾಮರಾಜನಗರದ ಗಡಿಭಾಗ ತಮಿಳುನಾಡಿನ‌ ಅಸನೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯೊಂದು ರಂಪಾಟ ಮಾಡಿದೆ. ಕೆಟ್ಟು ನಿಂತ ಲಾರಿಯ ಟಾರ್ಪಲ್ ಕಿತ್ತೆಸೆದು ದಾಂಧಲೆ ನಡೆಸಿದೆ. ಆಹಾರ ಅರಸಿ ಕಾಡಿನಿಂದ ಒಂಟಿ ಸಲಗವು ನಾಡಿಗೆ ಬರುತ್ತಿದೆ. ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಆನೆ ನಿಂತಿದ್ದರಿಂದ ಅರ್ಧ ತಾಸಿಗೂ ಹೆಚ್ಚು ಸಮಯ ಟ್ರಾಫಿಕ್ ಜಾಂ ಉಂಟಾಗಿತ್ತು.

ಇದನ್ನೂ ಓದಿ: Shakti Scheme : ಫ್ರೀ ಬಸ್‌ನಲ್ಲಿ ಮುಂದುವರಿದ ಹೊಡಿಬಡಿ; ಹೆಣ್ಮಕ್ಕಳ ಚಪ್ಪಲಿ ಫೈಟಿಂಗ್‌ ನೋಡಿ

ಹಾಸನ ಜನರ ನಿದ್ದೆಗೆಡಿಸಿದ ಕರಡಿ ಹೆಸರಿನ ಸಲಗ

ಒಂಟಿಸಲಗವೊಂದು ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದೆಗೆಡಿಸಿದೆ. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ, ಕಲ್ಕುಂದ, ಇರುಕುರಹಳ್ಳಿ ಗ್ರಾಮಗಳಲ್ಲಿ ಕರಡಿ ಹೆಸರಿನ ಕಾಡಾನೆ ಕಾಣಿಸಿಕೊಳ್ಳುತ್ತಿದೆ. ಭುವನೇಶ್ವರಿ, ಓಲ್ಡ್‌ಬೆಲ್ಟ್‌ ಹೆಸರಿನ ಕಾಡಾನೆಗಳ ಗುಂಪಿನಲ್ಲೇ ಕರಡಿ ಹೆಸರಿನ ಸಲಗ ಇರುತಿತ್ತು. ಆದರೆ ಕೆಲ ದಿನಗಳಿಂದ ಗುಂಪಿನಿಂದ ಬೇರ್ಪಟ್ಟಿದೆ.

ಈ ಹಿಂದೆ ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರ ಮೇಲೆ ದಾಳಿ ಮಾಡಿ ಕೊಂದಿತ್ತು. ಇದೀಗ ಸಕಲೇಶಪುರ ತಾಲೂಕಿನ ಜನನಿಬಿಡ ಪ್ರದೇಶದಲ್ಲಿ ಕರಡಿ ಕಾಣಿಸಿಕೊಳ್ಳುತ್ತಿದೆ. ಮನುಷ್ಯರನ್ನು ಕಂಡ ಕೂಡಲೇ ದಾಳಿ ಮಾಡುತ್ತಿದೆ. ನಿನ್ನೆ ಬುಧವಾರ ಕಲ್ಕುಂದ ಗ್ರಾಮದಲ್ಲಿ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿದ್ದರಿಂದ ಹಾಗೂ ಸ್ಥಳದಲ್ಲಿದ್ದ ಕಾರ್ಮಿಕರು ಕಿರುಚಿದ್ದರಿಂದ ಅಲ್ಲಿಂದ ಹೊರಟು ಹೋಗಿತ್ತು. ಇದರಿಂದ ಇಬ್ಬರು ಬದುಕುಳಿದಿದ್ದರು.

ಸದ್ಯ ಯಾವಾಗೆಂದರೆ ಆಗ ಮನೆಯ ಬಳಿಯೇ ಬಂದು ಸಲಗ ನಿಲ್ಲುತ್ತಿದೆ. ಜತೆಗೆ ಕಾಡಾನೆ ಚಲನವಲನ ಗಮನಿಸಲು ಮುಂದಾಗಿರುವ ಇಟಿಎಫ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿಯನ್ನೇ ಅಟ್ಟಾಡಿಸುತ್ತಿದೆ. ಅನಾಹುತ ಸಂಭವಿಸುವ ಮುನ್ನ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version