ಆನೇಕಲ್/ ಚಿತ್ರದುರ್ಗ: ಆಹಾರ ಅರಸಿ ನಾಡಿಗೆ ಬರುತ್ತಿರುವ ಗಜಪಡೆಯ ಹಾವಳಿ (Elephant attack) ಮುಂದುವರಿದಿದ್ದು, ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತೀವೆ. ಆನೇಕಲ್ ಹಾಗೂ ತಮಿಳುನಾಡಿನ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ನಾಯಕನಹಳ್ಳಿ, ಸೋಲೂರು, ಮೆಣಸಿನಗನಹಳ್ಳಿ ಗ್ರಾಮಗಳ ಸುತ್ತಮುತ್ತ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದ್ದು, ನೀಲಗಿರಿ ತೋಪಿನಲ್ಲಿ ಅಡ್ಡಾಡಿದೆ.
ಕಾಡಾನೆ ಹಿಂಡು ಕಂಡೊಡನೆ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ತೋಟಗಳಿಗೂ ಹೋಗಲು ಆಗದೆ ಮನೆಯಲ್ಲಿ ಕೂರುವಂತಾಗಿದೆ. ಇತ್ತ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದ್ದು, ರೈತರು ಮರವೇರಿ ಕುಳಿತು ತಮ್ಮ ಮೊಬೈಲ್‌ನಲ್ಲಿ ಆನೆಗಳ ಓಡಾಟವನ್ನು ವಿಡಿಯೊ ಮಾಡಿದ್ದಾರೆ. ಇತ್ತ ತೋಟಗಳಿಗೆ ನುಗ್ಗಲು ಯತ್ನಿಸುತ್ತಿದ್ದ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದರು. ಕಾಡಾನೆಗಳು ಹೊಲ-ಗದ್ದೆಗಳಲ್ಲಿ ರಾಗಿ ಮೆದೆಯನ್ನು ತುಳಿಯುವುದು ಜತೆಗೆ ತರಕಾರಿ ಬೆಳೆಗಳನ್ನು ತಿಂದು ಹೋಗುತ್ತಿದೆ.
ಹೊಸದುರ್ಗದಲ್ಲೂ ಕಾಡಾನೆ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ವಿವಿ ಸಾಗರದ ಹಿನ್ನೀರ ಪ್ರದೇಶದಲ್ಲಿ ಆನೆ ಪ್ರತ್ಯಕ್ಷವಾಗಿದೆ. ಗ್ರಾಮಕ್ಕೆ ಭಾನುವಾರ ರಾತ್ರಿ ಕಾಡಾನೆ ಬಂದು ಹೋಗಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತಿಗೊಂಡಿದ್ದು, ಆನೆ ಪತ್ತೆಯಾದ ಸ್ಥಳದಲ್ಲೆಲ್ಲ ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಕಾಡಾನೆಯು ಹಿರಿಯೂರು ಅಥವಾ ಚನ್ನಗಿರಿ ಕಡೆಗೆ ಸಂಚರಿಸಿರುವ ಸಾಧ್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಸುಜಾತ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳಿನಿಂದ ಸತಾಯಿಸುತ್ತಿದ್ದ 10 ವರ್ಷದ ಗಂಡಾನೆ ಕೊನೆಗೂ ಸೆರೆ
ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿ ರಾಮೇಶ್ವರ ದೇವಸ್ಥಾನದ ಬಳಿ ಡಿಸೆಂಬರ್ 31ರ ಮುಂಜಾನೆ ಕಾಣಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸತಾಯಿಸುತ್ತಿದ್ದ 10 ವರ್ಷ ಪ್ರಾಯದ ಗಂಡು ಕಾಡಾನೆಯನ್ನು ಅರಣ್ಯ ಇಲಾಖೆ ಕಳೆದ ಶುಕ್ರವಾರ ಕೊನೆಗೂ ಸೆರೆ (Elephant trapped) ಹಿಡಿದಿದೆ.
ಹಾರೋಗೊಳಿಗೆ, ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೆರೆ, ಅಮ್ತಿ, ಮಳೂರು, ಬಳಗಟ್ಟೆ, ಕೆರೆಕೊಪ್ಪ ಸುತ್ತಮುತ್ತಲಿನ ಸುಮಾರು 320 ಹೆಕ್ಟೇರ್ ಕಿರು ಅರಣ್ಯ ಪ್ರದೇಶದಲ್ಲಿ ಆನೆ ಮೂರು ತಿಂಗಳಿನಿಂದ ಬೀಡುಬಿಟ್ಟಿತ್ತು. ಸುತ್ತಲಿನ ರೈತರ ತೋಟಗಳ ಬೆಳೆ ಹಾನಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆನೆ ಹಿಡಿಯುವಂತೆ ಆಗ್ರಹಿಸಿದ್ದರು. ಇಲ್ಲಿಯವರೆಗೆ ಈ ಆನೆ ಯಾವುದೇ ಜೀವ ಹಾನಿ ಮಾಡಿರಲಿಲ್ಲವಾದರೂ ಬೆಳೆ ಹಾನಿ ಮಾಡಿತ್ತು. ವಿಶೇಷ ಎಂದರೆ ಈ ಆನೆ ಹೆಚ್ಚಾಗಿ ಜನನಿಬಿಡ ಪ್ರದೇಶದಲ್ಲಿಯೇ ಹಾಜರು ಹಾಕುತ್ತಿತ್ತು.
ಹಾಗಾಗಿ ಹಿಡಿಯುವುದು ಅನಿವಾರ್ಯ ಆಗಿತ್ತು.
ಈ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಆನೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿತ್ತು. ಆನೆ ಹಿಡಿಯಲು ಸೆಣಬು, ಚೈನ್, ಅರಿವಳಿಕೆ ಮದ್ದು, ಕ್ರೇನ್, ಸಾಕಾನೆ, ಮಚಾನ್ ಮುಂತಾದ ಅಗತ್ಯತೆಗಳನ್ನು ಸಿದ್ಧಪಡಿಸಿದ್ದರು. ಆನೆ ಹೆಜ್ಜೆ ಗುರುತು ಇರುವ ಪ್ರದೇಶದ ಯಾವುದು ಎಂದು ಗುರುತಿಸಲು ಸಿಬ್ಬಂದಿ ಮೊದಲು ಕೂಂಬಿಂಗ್ ಮಾಡಿಕೊಂಡಿದ್ದರು. ನಂತರ ಸಾಕಾನೆಗಳ ಸಹಾಯದಿಂದ ಆನೆಗೆ ಡಾಟ್ (ಶೂಟ್ ಮೂಲಕ ಅರಿವಳಿಕೆ ನೀಡುವುದು) ಮಾಡುವ ಪ್ರಯತ್ನ ನಡೆಸಿದ್ದರು.
ಆದರೆ ಈ ಗಂಡಾನೆ ವೇಗವಾಗಿ ನಾಪತ್ತೆಯಾಗುತ್ತಿದ್ದ ಕಾರಣ ತಕ್ಷಣಕ್ಕೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಗುರುವಾರ ಸಂಜೆ ಸುಮಾರು 6.30ರಿಂದ 7 ಗಂಟೆ ಸುಮಾರಿಗೆ ಆನೆಗೆ ಮೊದಲ ಡಾಟ್ ನೀಡಲಾಗಿತ್ತು. ಕೆಲವು ನಿಮಿಷಗಳ ನಂತರ ಮತ್ತೊಂದು ಬೂಸ್ಟರ್ ಡಾಟ್ ನೀಡಿ ಆನೆಯ ಕಾಲುಗಳನ್ನು ಕಟ್ಟಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕ್ರೇನ್ ಸಹಾಯದಿಂದ ಆನೆಯನ್ನು ಲಾರಿಗೆ ಹತ್ತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಚಾಮರಾಜನಗರದ ಡಾ. ಮುಜೀಬ್ ರೆಹಮಾನ್, ಬಂಡೀಪುರದ ಡಾ. ವಸೀಮ್, ಶಿವಮೊಗ್ಗದ ಡಾ. ವಿನಯ್, ಮೃಗಾಲಯದ ವೈದ್ಯ ಡಾ. ಮುರುಳಿ, ಶಾರ್ಪ್ ಶೂಟರ್ ಡಾ. ಅಕ್ರಮ್ ಕಾಡಾನೆಯನ್ನು ಸೆರೆ ಹಿಡಿಯಲು ವೈದ್ಯಕೀಯ ತಂಡವಾಗಿ ಕಾರ್ಯ ನಿರ್ವಹಿಸಿದ್ದರು. ಸಕ್ರೇಬೈಲು ಆನೆ ಬಿಡಾರದ 4 ಆನೆಗಳಾದ ಭಾನುಮತಿ, ಸಾಗರ್, ಬಾಲಣ್ಣ, ಬಹದ್ದೂರ್, ನಾಲ್ವರು ಮಾವುತರು, ಎಂಟು ಮಂದಿ ಕಾವಾಡಿಗಳು, ತೀರ್ಥಹಳ್ಳಿ, ಮೇಗರವಳ್ಳಿ, ಮಂಡಗದ್ದೆ ವಲಯಾರಣ್ಯದ ಸಿಬ್ಬಂದಿ, ಎಸಿಎಫ್ ಪ್ರಕಾಶ್ ಹಾಗೂ ವನ್ಯಜೀವಿ ವಿಭಾಗದ ಸಹಕಾರದಲ್ಲಿ ಆನೆಯನ್ನು ಸೆರೆಹಿಡಿಯಲಾಗಿದೆ ಎಂದು ಡಿಎಫ್‌ಒ ಶಿವಶಂಕರ್ ತಿಳಿಸಿದ್ದಾರೆ.
ಸಾಕು ಹೆಣ್ಣಾನೆ ಭಾನುಮತಿ ಬಳಸಿ ಕಾಡಲ್ಲಿರುವ ಆನೆಯನ್ನು ಸೆಳೆಯುವ ತಂತ್ರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯೋಗ ಮಾಡಿದ್ದಾರೆ. ಹನಿ ಟ್ರ್ಯಾಪ್‌ಗಾಗಿ ಹೆಣ್ಣಾನೆಯನ್ನು ಕಾಡಾನೆ ಓಡಾಡುವ ಸ್ಥಳಗಳಲ್ಲಿ ಕಟ್ಟಲಾಗುತ್ತದೆ. ವಾಸನೆ ಗ್ರಹಿಸಿ ಸುತ್ತಲ ಪ್ರದೇಶಲ್ಲಿ ಹೆಣ್ಣಾನೆ ಇರುವುದನ್ನು ಗಂಡಾನೆಗಳು ಗ್ರಹಿಸುತ್ತವೆ. ಇದೇ ರೀತಿ ಮಧ್ಯ ಕಾಡಿನಿಂದ ಡಾಟ್‌ಗೆ ಅನುಕೂಲವಾಗುವ ಕಡೆಗೆ ಹೆಣ್ಣಾನೆಯನ್ನು ಓಡಾಡಿಸಿ ಒಂದು ಪ್ರದೇಶದಲ್ಲಿ ಕಟ್ಟುತ್ತಾರೆ. ಆನೆ ಬರುವ ಸಾಧ್ಯತೆ ಇದ್ದರೆ ವೈದ್ಯರ ತಂಡ ಮಚಾನ್ ನಿರ್ಮಿಸಿ ರಾತ್ರಿ ಕಾವಲು ಕಾಯುತ್ತಾರೆ. ಕಾಡಾನೆ ಕಂಡು ಬಂದ ತಕ್ಷಣ ಅರವಳಿಕೆ ನೀಡಿ ಸೆರೆ ಹಿಡಿಯಲಾಗುತ್ತದೆ. ಈಗ ಇಲ್ಲಿ ಸೆರೆ ಹಿಡಿದ ಕಾಡಾನೆಯನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಇದನ್ನೂ ಓದಿ: Elephant Attack: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ