ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದಲ್ಲಿ ಮಲೆನಾಡಿನ ಸುತ್ತಮುತ್ತ ಉಪಟಳ ನೀಡುತ್ತಿದ್ದ ಕಾಡಾನೆಯೊಂದನ್ನು ಸೆರೆ (Elephant attack) ಹಿಡಿಯಲಾಗಿದೆ. ಸೋಮವಾರ ಬೆಳಗ್ಗೆ ಗಜಪಡೆಗಳೊಂದಿಗೆ ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಿಳಿದಿದ್ದರು.
ಕಳೆದ ಮೂರು ತಿಂಗಳಲ್ಲಿ ಮೂರು ಮಂದಿಯನ್ನು ಕಾಡಾನೆಗಳು ಬಲಿ ಪಡೆದಿದ್ದವು. ಹೀಗಾಗಿ ಮೂಡಿಗೆರೆಯಲ್ಲಿ ಕಾಡಾನೆ ಬೈರನನ್ನು ಸೆರೆಹಿಡಿಯಲು ಆಪರೇಷನ್ ಮತ್ತೆ ಶುರುವಾಗಿದೆ. ರಾಜ್ಯ ಸರ್ಕಾರದ ಆದೇಶದ ಬೆನ್ನಲ್ಲೇ ಕಾರ್ಯೋನ್ಮುಖವಾಗಿರುವ ಅರಣ್ಯ ಇಲಾಖೆಯು ಶತಾಯಗತಾಯ ಪುಂಡಾನೆ ಬೈರ ಸೇರಿದಂತೆ ಮೂರು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ನಿರ್ಧರಿಸಿದೆ.
ಭಾನುವಾರ ರಾತ್ರಿ ಮೂಡಿಗೆರೆಯ ಕುಂದೂರಿಗೆ 6 ಸಾಕಾನೆಗಳು ಬಂದಿವೆ. ಅಭಿಮನ್ಯು, ಮಹಾರಾಷ್ಟ್ರದ ಭೀಮ, ಕರ್ನಾಟಕದ ಭೀಮ, ಮಹೇಂದ್ರ, ಪ್ರಶಾಂತ್, ಅಜೇಯ ಹೆಸರಿನ ಆರು ಆನೆಗಳು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.
ಕಳೆದ ಒಂದು ವಾರದ ಹಿಂದಷ್ಟೇ ಮೂಡಿಗೆರೆಯ ಹುಲ್ಲೇಮನೆ ಗ್ರಾಮದಲ್ಲಿ ಶೋಭಾ ಎಂಬ ಮಹಿಳೆ ಮೇಲೆ ದಾಳಿ ನಡೆಸಿ ಬಲಿ ಪಡೆದಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಚೆಕ್ ಪೋಸ್ಟ್ ಅನ್ನು ಧ್ವಂಸ ಮಾಡಿ ಆಕ್ರೋಶವನ್ನು ಹೊರಹಾಕಿದರು. ಇದೇ ವೇಳೆ ಸ್ಥಳಕ್ಕೆ ತಡವಾಗಿ ಭೇಟಿ ನೀಡಿದ್ದ ಸ್ಥಳೀಯ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಹಲ್ಲೆ ನಡೆಸಿದ ಆರೋಪದ ಸುದ್ದಿ ಸಹ ರಾಜ್ಯಾದ್ಯಂತ ಸದ್ದು ಮಾಡಿತ್ತು.
ಕಳೆದ ಆಗಸ್ಟ್ 15ರಂದು ಮೂಡಿಗೆರೆ ತಾಲೂಕಿನ ಪಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವವರನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು. ಊರುಬಗೆ ಗ್ರಾಮದ ನಿವಾಸಿ ಅರ್ಜುನ್ ಎಂಬುವವರನ್ನು ಕಾಡಾನೆ ದಾಳಿ ನಡೆಸಿ ಬಲಿ ಪಡೆದಿತ್ತು. ಒಟ್ಟು ಮೂರು ತಿಂಗಳಲ್ಲಿ ಮೂರು ಬಲಿ ಪಡೆಯುವ ಮೂಲಕ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿರುವ ಭೈರ ಹೆಸರಿನ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಇದೀಗ ರಾಜ್ಯ ಸರ್ಕಾರದ ಆದೇಶ ನೀಡಿದ ಬೆನ್ನಲ್ಲೇ ಕಾರ್ಯಾಚರಣೆಯೂ ಶುರುವಾಗಿದೆ.
ಮಧ್ಯಾಹ್ನದ ಹೊತ್ತಿಗೆ ಒಂದು ಆನೆ ಸೆರೆ
ಕಾರ್ಯಾಚರಣೆ ಆರಂಭಿಸಿದ ಕೇವಲ ಐದು ಗಂಟೆಯಲ್ಲಿಯೇ ಕುಂದೂರಿನ ಕೆಂಜಿಗೆ ಭಾಗದಲ್ಲಿ ಅರಿವಳಿಕೆ ಮದ್ದು ನೀಡಿ ಕಾಡಾನೆಯೊಂದನ್ನು ಸೆರೆಹಿಡಿಯಲಾಯಿತು. ಉಳಿದ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇತ್ತ ಸೆರೆ ಹಿಡಿದ ಕಾಡಾನೆಯನ್ನು ದುಬಾರೆ ಆನೆಕ್ಯಾಂಪ್‌ಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ | Motivational story | ಅಲ್ಲಾ ಮಾರಾಯ್ತಿ ಆನೆ ರಾಣಿ.. ನಿನ್ನ ಮರಿ ಮರ ಯಾಕೆ ಹತ್ತಬೇಕು? ಟಾಪರ್ ಯಾಕಾಗ್ಬೇಕು?