Site icon Vistara News

Elephant Attack : ಕಾಫಿ ತೋಟದಲ್ಲಿ ಕಾರ್ಮಿಕನ ಬೆನ್ನಟ್ಟಿ ಕೊಂದ ಕಾಡಾನೆ; ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

Labourer dead elephant attack in Hassan

ಹಾಸನ: ಕಾಫಿ ತೋಟದಲ್ಲಿ ಕೆಲಸ ಮುಗಿಸಿ ವಾಪಸ್‌ ಬರುವಾಗ ಕಾಡಾನೆಯೊಂದು ದಾಳಿ (Elephant Attack) ಮಾಡಿದೆ. ಕಾರ್ಮಿಕನನ್ನು ಅಟ್ಟಾಡಿಸಿ ಕೊಂದಿದೆ. ಹಾಸನ‌ ಜಿಲ್ಲೆ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ವಸಂತ್ (45) ಮೃತ ದುರ್ದೈವಿ.

ಘಟನೆ ನಡೆದು ಗಂಟೆಗಳೆ ಕಳೆದರೂ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಾರದಕ್ಕೆ ಗ್ರಾಮಸ್ಥರು ಕಿಡಿಕಾರಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಂತೆ ಒತ್ತಾಯಿಸಿ ಸ್ಥಳೀಯರು ಪಟ್ಟು ಹಿಡಿದರು. ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಸರಣಿ ಸಾವು ಸಂಭವಿಸುತ್ತಿದೆ. ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶವನ್ನು ಹೊರಹಾಕಿದರು.

ಮೃತದೇಹವಿಟ್ಟು ಪ್ರತಿಭಟನೆ

ಕಾಡಾನೆ ದಾಳಿ ಮಾಡಿದ ಜಾಗದಲ್ಲೇ ಮೃತದೇಹವಿಟ್ಟು ಸ್ಥಳೀಯರು ಪ್ರತಿಭಟಿಸಿದರು. ಘಟನಾ ಸ್ಥಳದಲ್ಲಿ ಹೆಚ್ಚು ಜನರು ಸೇರುತ್ತಿದ್ದ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಬೇಲೂರು ಮತ್ತು ಕೆಎಸ್‌ಆರ್‌ಪಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಬೇಲೂರು ಶಾಸಕ ಎಚ್.ಕೆ. ಸುರೇಶ್ ಹಾಗೂ ಎಸ್‌ಪಿ ಮೊಹಮ್ಮದ್ ಸುಜೀತಾ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಘಟನಾ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬರಬೇಕು, ಅಲ್ಲಿಯವರೆಗೂ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜತೆಗೆ ಬಿಕ್ಕೋಡು ಸಮೀಪದ ಕೈಮರ ಬಳಿ ರಸ್ತೆ ತಡೆದರು.

ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಶಾಸಕ ಸುರೇಶ್‌ ಕೂಡಲೇ ಸಚಿವ ಈಶ್ವರ್ ಖಂಡ್ರೆ ಅವರಿಗೆ ಫೋನ್‌ ಕರೆ ಮಾಡಿದರು. ಇದೊಂದು ದುರಾದೃಷ್ಟಕರ ಸಂಗತಿ. ಇಂತಹ ಘಟನೆ ನಡೆಯಬಾರದಿತ್ತು, ಆದರೆ ನಾವೆಲ್ಲಾ ಏನೇ ಪ್ರಯತ್ನ ಪಟ್ಟರೂ ಇಂತಹ ಘಟನೆ ನಡೆದು ಹೋಗಿದೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ, ಆದರೆ ತುರ್ತು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಾನು ಈಗ ಬರಲು ಆಗಲ್ಲ ಎಂದು ಶಾಸಕರಿಗೆ ಈಶ್ವರ್‌ ಖಂಡ್ರೆ ಉತ್ತರಿಸಿದರು.

ಇದನ್ನೂ ಓದಿ: Husband Assault : ಡಿವೋರ್ಸ್‌ಗಾಗಿ ಪತ್ನಿಗೆ ಬ್ಲ್ಯಾಕ್‌ಮೇಲ್‌; ಖಾಸಗಿ ಫೋಟೊ, ವಿಡಿಯೊ ಅಪ್ಲೋಡ್‌!

MLA HK suresh Labourer dead elephant attack in Hassan

ಬಳಿಕ ನಮ್ಮ‌ ಭಾಗದಲ್ಲಿ ಕಾಡಾನೆ ಸಮಸ್ಯೆ ತೀವ್ರವಾಗಿದೆ. ಬೆಳೆ ಹಾನಿ ಹೆಚ್ಚಾಗಿದೆ ಪರಿಹಾರ ಸಿಗುತ್ತಿಲ್ಲ ಇಲ್ಲ. ಮೃತ ಕುಟುಂಬಕ್ಕೆ ಈಗಲೇ ಪರಿಹಾರ ಸಿಗಬೇಕು, ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಸಿಗಬೇಕು ಎಂದು ಸಚಿವರಿಗೆ ಶಾಸಕ ಸುರೇಶ್‌ ಮಾಹಿತಿ ನೀಡಿದರು. ಈ ವೇಳೆ ಎಲ್ಲಾ ರೀತಿಯ ಪರಿಹಾರ ಕೊಡಿಸೋಣ ಎಂದ ಸಚಿವ ಈಶ್ವರ್‌, ಈ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ನಾವು ಚರ್ಚೆ ಮಾಡೋಣ. ಈಗ ನೀವೇ ಮಾತಾಡಿ ಜನರಿಗೆ ಮನವರಿಕೆ‌ ಮಾಡಿ ಎಂದರು.

ಜಿಲ್ಲಾಧಿಕಾರಿ ವಾಹನಕ್ಕೆ ಅಡ್ಡಹಾಕಿದ ಪ್ರತಿಭಟನಾಕಾರರು

ಇತ್ತ ಬೇಲೂರು-ಅರೇಹಳ್ಳಿ ರಸ್ತೆ ತಡೆದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ವಾಹನಕ್ಕೆ ಅಡ್ಡ ಹಾಕಿದರು. ಹೀಗಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್‌ಪಿ ಮಹಮದ್ ಸುಜೀತಾ, ಎಸಿ ಶೃತಿ, ತಹಸೀಲ್ದಾರ್ ಮಮತಾ ಘಟನಾ ಸ್ಥಳಕ್ಕೆ ಎರಡು ಕಿಲೋ ಮೀಟರ್ ನಡೆದು ಸಾಗಿದರು.

ಪ್ರತಿಭಟನಾಕಾರರ ಮನವೊಲಿಕೆಗೆ ಡಿಸಿ ಸತ್ಯಭಾಂ ಶತ ಪ್ರಯತ್ನ ಮಾಡಿದರೂ, ಬಗ್ಗದ ಹೋರಾಟಗಾರರು ಇವತ್ತೇ ಉಸ್ತುವಾರಿ ಹಾಗು ಅರಣ್ಯ ಸಚಿವರು ಸ್ಥಳಕ್ಕೆ ಬರಬೇಕೆಂದರು. ಸಚಿವರು ಬರದಿದ್ದರೆ ಮೃತದೇಹ ಮೇಲೆತ್ತಲು ಬಿಡಲ್ಲ ಎಂದರು. ಈ ವೇಳೆ ಡಿಸಿ ಸತ್ಯಭಾಮ ಉಸ್ತುವಾರಿ ಸಚಿವರು ನಾಳೆ ಬರುತ್ತಾರೆ ಎಂದರು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು, ಪ್ರತಿ ಬಾರಿ ಕಾಡಾನೆ ದಾಳಿಯಿಂದ ಸಾವು ಸಂಭವಿಸಿದಾಗ ಹೀಗೆ ಹೇಳುತ್ತೀರಿ. ಈ ಹಿಂದೆ ಇಬ್ಬರ ಸಾವಾದಾಗ ಸಚಿವರು ಬರುವುದಾಗಿ ಹೇಳಿದ್ದರೂ, ಆದರೆ ಈವರೆಗೂ ಅರಣ್ಯ ಸಚಿವರು ಸ್ಥಳಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿಯೇ ಪ್ರತಿಭಟನಾಕಾರರ ಸಮಸ್ಯೆಯನ್ನು ಶಾಸಕ ಎಚ್.ಕೆ.ಸುರೇಶ್ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆಲಿಸಿದರು. ಅರಣ್ಯ ಸಚಿವರು ಸ್ಥಳಕ್ಕೆ ಆಗಮಿಸಬೇಕು ಹಾಗೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಬಿಗಿಪಟ್ಟು ಹಿಡಿದರು. ಬೇಲೂರು-ಅರೇಹಳ್ಳಿ ರಸ್ತೆ ತಡೆದ ಕಾರಣಕ್ಕೆ ಇತರೆ ವಾಹನ ಸವಾರರು ಪರದಾಡಿದರು. ಸದ್ಯ ಪ್ರತಿಭಟನಾ ಸ್ಥಳದಲ್ಲೇ ಡಿಸಿ, ಎಸ್ಪಿ, ಎಸಿ, ತಹಸೀಲ್ದಾರ್ ಹಾಗೂ ಶಾಸಕರು ಮೊಕ್ಕಾಂ ಹೂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version